ಕೆರೆಗಳ ಹೂಳು ತೆಗೆಸಲು ಮನವಿ

dvg-balluru-16.jpg
Published on

ದಾವಣಗೆರೆ : ಜಿಲ್ಲೆಯ ಕೆರೆಗಳ ಹೂಳು ತೆಗೆಸುವ ಮೂಲಕ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.
 ಸಂಘದ ಮುಖಂಡರು ಗುರುವಾರ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದರು.
 ಜಿಲ್ಲೆಯಲ್ಲಿ 527 ಕೆರೆಗಳಿದ್ದು ಇದರಲ್ಲಿ ನೀರಾವರಿ ಇಲಾಖೆಗೆ ಸಂಬಂಧಿಸಿದ ಸೂಳೆಕೆರೆ ಮತ್ತು ಡಿಬಿ ಕೆರೆ ಪಿಕಪ್‌ಗಳು ಅತಿ ದೊಡ್ಡವು. ಅಲ್ಲದೆ 40 ರಿಂದ 120ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದ ಕೆರೆಗಳು ಸಣ್ಣ ನೀರಾವರಿ ಇಲಾಖೆಗೆ ಸೇರಿವೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳು 40 ಎಕರೆ ವಿಸ್ತೀರ್ಣ ಹೊಂದಿವೆ ಎಂದು ತಿಳಿಸಿದರು.
 ಸುಮಾರು 50 ವರ್ಷಗಳಿಂದ ಯಾವುದೆ ಕೆರೆಯ ಹೂಳು ತೆಗೆಯದೆ ಇರುವುದರಿಂದ ತಿಳಿ ಮಣ್ಣು ಶೇಖರಣೆಯಾಗಿರುತ್ತದೆ. ಅದನ್ನು ರೈತರಿಗೆ ನೀಡಿದರೆ ಸರ್ಕಾರ ರೈತರಿಗೆ ಗೊಬ್ಬರವನ್ನು ಉಚಿತವಾಗಿ ನೀಡಿದಂತಾಗುತ್ತದೆ. ಕ್ರಿಮಿನಾಶಕ ಬಳಕೆ ಮಾಡದೆ ಸಮತೋಲನ ಆಹಾರವನ್ನು ನೀಡಿದಂತಾಗುತ್ತದೆ ಎಂದು ಹೇಳಿದರು.
 ಹರಿಹರ ತಾಲೂಕಿನ ಭೈರನಪಾದ ಏತ ನೀರಾವರಿ ಯೋಜನೆಯ ಬದಲು ಬ್ಯಾರೇಜ್ ನಿರ್ಮಾಣ ಮಾಡಿದರೆ 13 ಟಿಎಂಸಿ ನೀರು ಶೇಖರಣೆಯಾಗುತ್ತದೆ. ಇದರಿಂದ ಒಟ್ಟು ಜಿಲ್ಲೆಯಲ್ಲಿ 30 ಟಿಎಂಸಿ ನೀರು ಬಳಕೆಗೆ ಸಿಗಲಿದೆ. ಆದ್ದರಿಂದ ಬಾಕಿ ಇರುವ ಕೆರೆಗಳ ಹೂಳು ತೆಗೆಸುವಂತೆ ಒತ್ತಾಯಿಸಿದರು.
 ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾಧ್ಯಕ್ಷ ರಾಮಪುರ ಬಸವರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಿಯಾಪುರ ತಿರುಮಲೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net