

ನವದೆಹಲಿ: ಉದ್ಯಮಿಯೊಬ್ಬರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆ ಕೊಲೆಯ ಹಿಂದೆ ಉದ್ಯಮಿಯ ಪುತ್ರಿಯೇ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಮಾತ್ರವಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನೂ ಒಳಗೊಂಡಂತೆ ನಾಲ್ವರನ್ನು ಬಂಧಿಸಿದ್ದಾರೆ.
ಜಾರ್ಖಂಡ್ನ ಸೆರೈಕಲ-ಖರ್ಸ್ವನ್ ಜಿಲ್ಲೆಯ ಕನ್ಹಯ್ಯ ಸಿಂಗ್ ಎಂಬ ಉದ್ಯಮಿಯನ್ನು ಅಪರಿಚಿತರು ಹರಿಓಂನಗರ್ ಪ್ರದೇಶದಲ್ಲಿ ಜೂ. 29ರಂದು ಗುಂಡಿಟ್ಟು ಸಾಯಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಉದ್ಯಮಿಯ ಪುತ್ರಿ, 20 ವರ್ಷದ ಅಪರ್ಣ ಸಿಂಗ್, ಆಕೆಯ ಪ್ರಿಯಕರ ರಾಜ್ವೀರ್ ಸಿಂಗ್, ಶೂಟರ್ ನಿಖಿಲ್ ಗುಪ್ತ ಮತ್ತು ಆತನ ಸಹಚರ ಸೌರಭ್ ಕಿಸ್ಕು ಅವರನ್ನು ಬಂಧಿಸಿದ್ದಾಗಿ ಎಸ್ಪಿ ಆನಂದ್ ಪ್ರಕಾಶ್ ತಿಳಿಸಿದ್ದಾರೆ.
ಅಪರ್ಣ ಹಾಗೂ ರಾಜ್ವೀರ್ ಪ್ರೀತಿಗೆ ಕನ್ಹಯ್ಯ ಸಿಂಗ್ ವಿರೋಧವಿದ್ದು, ಇವರಿಬ್ಬರ ಪ್ರೇಮಪ್ರಕರಣ ತಿಳಿದ ಮೇಲೆ ಅವರು ಮಗಳಿಗೆ ಬೇರೆ ಮದುವೆ ಮಾಡಲು ಹುಡುಗನನ್ನು ನೋಡಲಾರಂಭಿಸಿದ್ದರು. ಆದರೆ ಹಠಕ್ಕೆ ಬಿದ್ದಿದ್ದ ಮಗಳು ಪ್ರಿಯಕರನನ್ನು ಬಿಡಲಾಗದೆ ತಂದೆಯ ಹತ್ಯೆಗೆ ಸಂಚು ಹೂಡಿದ್ದಳು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಪ್ರೇಮಿಗಳು ಮೂರು ವರ್ಷದಿಂದ ಕನ್ಹಯ್ಯ ಅವರ ಕೊಲೆಗೆ ಯೋಜನೆ ಹಾಕಿಕೊಳ್ಳುತ್ತಲೇ ಬಂದಿದ್ದು, ಜೂ. 20ರಂದು ಪಾಟ್ನಾದಲ್ಲಿ ಕೊಲೆಗೆ ಮುಂದಾಗಿದ್ದರೂ ಅದು ಸಾಧ್ಯವಾಗಿರಲಿಲ್ಲ. ತಂದೆ ಅಲ್ಲಿರುವ ಕುರಿತು ಮಗಳು ವಾಟ್ಸ್ಆ್ಯಪ್ ಮೂಲಕ ಲೊಕೇಶನ್ ಕಳಿಸಿದ್ದಳು. ಆದರೆ ಕೊಲೆ ಮಾಡುವ ಪ್ರಯತ್ನ ಫಲಿಸಿರಲಿಲ್ಲ.
ಇನ್ನು ಈ ಕೊಲೆಗೆ ಮಗಳು ಐದು ದಿನಗಳ ಹಿಂದೆಯೇ ಪ್ಲ್ಯಾನ್ ಮಾಡಿ ಓಕೆ ಮಾಡಿದ್ದು, ಸುಪಾರಿ ಹಣದ ಬದಲಿಗೆ ಅಪ್ಪ ಗಿಫ್ಟ್ ಕೊಟ್ಟಿದ್ದ ವಜ್ರದುಂಗುರವನ್ನೇ ಶೂಟರ್ಗೆ ಕೊಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.