

ನವದೆಹಲಿ: ತೀವ್ರ ಸಂಚಲನ ಮೂಡಿಸಿದ್ದ ಶೀನಾ ಬೋರಾ ಹತ್ಯಾಕಾಂಡದಲ್ಲಿ ಪ್ರಮುಖ ಆರೋಪಿಯಾಗಿದ್ದ ಇಂದ್ರಾಣಿ ಮುಖರ್ಜಿ ಸದ್ಯ ಜೈಲಿನಿಂದ ಹೊರಬಂದಿದ್ದಾಳೆ.
2012ರಲ್ಲಿ ಮಗಳನ್ನೇ ಕೊಂದಿದ್ದ ಈಕೆ ಪ್ರಕರಣ ಮುಚ್ಚಿ ಹಾಕಲಾಗಿತ್ತು, ಬಳಿಕ 2015ರಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈಕೆಯನ್ನು ಬಂಧಿಸಲಾಗಿತ್ತು.
ನಿನ್ನೆಯೇ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಕಾಗದ ಪತ್ರಗಳಿಂದ ವಿಳಂಬವಾಗಿದ್ದ ಹಿನ್ನಲೆಯಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಗಿದೆ.
2015ರಿಂದಲೂ ಮುಂಬೈ ಜೈಲಿನಲ್ಲೇ ಇದ್ದ ಇಂದ್ರಾಣಿ, ಜಾಮೀನು ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಫೆಬ್ರವರಿಯಲ್ಲಿ ಜಾಮೀನು ನೀಡಲು ಕೋರ್ಟ್ ನಿರಾಕರಿಸಿತ್ತು.
ವಿದೇಶಕ್ಕೆ ತೆರಳದಂತೆ ಹಾಗೂ ಸಾಕ್ಷ್ಯಕ್ಕೆ ಸಂಬಂಧಪಟ್ಟಂತೆ ಯಾರನ್ನೂ ಭೇಟಿ ಮಾಡಬಾರದೆಂಬ ಷರತ್ತು ಅನ್ವಯ ಜಾಮೀನು ನೀಡಲಾಗಿದೆ. ಆರೂವರೆ ವರ್ಷಗಳಿಂದ ಸತತ ಜೈಲು ಶಿಕ್ಷೆ ಅನುಭವಿಸಿರುವ ಇಂದ್ರಾಣಿಗೆ ಜಾಮೀನು ನೀಡಬೇಕೆಂದು ಆಕೆಯ ಪರ ವಕೀಲ ವಾದ ಮಾಡಿದ್ದರು.
ತನ್ನಮಗಳ ಹತ್ಯೆಗೆ ಸಹಕರಿಸಿದ ಇಂದ್ರಾಣಿಯ ಪತಿ ಪೀಟರ್ ಮುಖರ್ಜಿಗೆ ಈಗಾಗಲೇ ಜಾಮೀನು ದೊರೆತಿದೆ. 24 ವರ್ಷದ ಶೀನಾ ಬೋರಾಳನ್ನು ಸಾಯಿಸಿ, ಆಕೆಯ ದೇಹಕ್ಕೆ ಬೆಂಕಿ ಇಟ್ಟು ಗುರುತ ಸಿಗದಂತೆ ರಾಯಘಢ ಎಂಬಲ್ಲಿ ಕಸದಲ್ಲಿ ಬಿಸಾಡಲಾಗಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಲೇ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿತ್ತು. (ಏಜೆನ್ಸೀಸ್)