

ರಾಣೆಬೆನ್ನೂರ: ತಾವು ತೆಗೆದುಕೊಂಡಿದ್ದ ದತ್ತು ಮಗು ಕೂಡ ಮೃತಪಟ್ಟ ಕಾರಣ ಆ ಮಗುವಿನ ಹೆಸರಿನಲ್ಲಿ ಇಂದಿನ ಶಾಲಾ ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿ ವಿತರಿಸುತ್ತಿರುವ ಹಾಲೇಶಪ್ಪ ಬಂಗಿಗೌಡ್ರ ಕಾರ್ಯ ಶ್ಲಾಘನೀಯ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ತಾಲೂಕಿನ ಹೊಳೆಆನ್ವೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಲೇಶಪ್ಪ ಬಂಗಿಗೌಡ್ರ ಅವರಿಂದ ಗುರುವಾರ ಏರ್ಪಡಿಸಿದ್ದ ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಾಲೇಶಪ್ಪನವರು ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಂಡು ಕವಿತಾ ಎಂದು ಮಗುವಿಗೆ ನಾಮಕರಣ ಮಾಡಿ ಸ್ವಂತ ಮಗಳಂತೆ ಪೋಷಿಸಿದ್ದರು. ಆದರೆ, 14ನೇ ವಯಸ್ಸಿನಲ್ಲಿ ಆ ಮಗು ಜ್ವರದಿಂದ ಬಳಲಿ ಮೃತಪಟ್ಟಿದ್ದಳು. ಆಕೆಯ ನೆನಪಿಗಾಗಿ ಹಾಲೇಶಪ್ಪ ಪ್ರತಿ ವರ್ಷ ಮಕ್ಕಳಿಗೆ ಉಚಿತವಾಗಿ ಕಲಿತಾ ಸಾಮಗ್ರಿ ವಿತರಣೆ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ರತ್ನಮ್ಮ ಬಂಗಿಗೌಡ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ನಿವೃತ್ತ ಶಿಕ್ಷಕ ಜೆ.ಎಂ. ಮಠದ, ರಮೇಶ ಹೂಲಿಹಳ್ಳಿ ಹಾಗೂ ಶಾಲೆಯ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.