

ಚಿಕ್ಕಮಗಳೂರು: ಶ್ರೀರಾಮ ಸೇನೆಯಿಂದ ಅ.30 ರಿಂದ ನ.5ರವರೆಗೆ ದತ್ತಮಾಲಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹೇಳಿದರು.
ಪ್ರತಿ ವರ್ಷದಂತೆ ಈ ಬಾರಿಯೂ ದತ್ತಮಾಲಾಧಾರಣೆ ಹಾಗೂ ಶೋಭಾಯಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದು ಕಾರ್ಯಕರ್ತರ ಸತತ ಹೋರಾಟಕ್ಕೆ ಸ್ಪಂದಿಸಿದ ಹಿಂದಿನ ಬಿಜೆಪಿ ಸರ್ಕಾರ ದತ್ತಪೀಠಕ್ಕೆ ಹಿಂದು ಅರ್ಚಕರ ನೇಮಿಸಿದೆ. ಆದರೆ ಅಲ್ಲಿನ ಗೋರಿಗಳನ್ನು ತೆರವುಗೊಳಿಸುವ ಮೂಲಕ ಊರುಸ್ ಆಚರಣೆ ನಿಲ್ಲಿಸಿಸಬೇಕು. ಶೀಘ್ರದಲ್ಲಿ ಹಿಂದುಗಳಿಗೆ ದತ್ತಪೀಠವನ್ನು ಸಂಪೂರ್ಣವಾಗಿ ಒಪ್ಪಿಸಬೇಕು. ಇಲ್ಲವಾದಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ದತ್ತ ಪೀಠದಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು. ಪೀಠದ ದಾಖಲೆಗಳು ಹಿಂದುಗಳ ಪರವಾಗಿವೆ. ಈ ಬಗ್ಗೆ ಮಾಹಿತಿ ಇದ್ದರೂ ಕೆಲವು ಸಂಘಟನೆಗಳು ಸಾಮರಸ್ಯ ಹಾಳು ಮಾಡಲು ಯತ್ನಿಸುತ್ತಿವೆ. ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಸೌಜನ್ಯ ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಮರೆಮಾಚಲಾಗಿದೆ. ಈ ಪ್ರಕರಣದ ತನಿಖೆಯಲ್ಲಿ ಪೊಲೀಸ್ ಇಲಾಖೆಗೆ ವೈಫಲ್ಯತೆ ಕಾಣುತ್ತಿದ್ದು, ಸರ್ಕಾರ ಪ್ರಕರಣವನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸೇನೆ ಜಿಲ್ಲಾಧ್ಯಕ್ಷ ಜ್ಞಾನೇಂದ್ರ, ರಂಜಿತ್ ಶೆಟ್ಟಿ, ನವೀನಾ, ನಂದನ್, ಪ್ರಸನ್ನ, ಪರುಶುರಾಮ್, ಯಶ್ವಂತ್ ಮತಿತರರು ಹಾಜರಿದ್ದರು.