

ಜೈಪುರ: ಬಾಲ್ಯ ವಿವಾಹ ತಡೆಯಲು ರಾಜಸ್ಥಾನ ಸರ್ಕಾರ ಹೊಸ ಯೋಜನೆಯೊಂದನ್ನು ಆರಂಭಿಸಿದ್ದು, ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಜನ್ಮದಿನವನ್ನೂ ನಮೂದಿಸಬೇಕು ಎಂದು ಆದೇಶಿಸಿದೆ.
ಆಹ್ವಾನ ಪತ್ರಿಕೆ ಮುದ್ರಿಸುವ ಮುದ್ರಣಾಲಯಗಳಿಗೆ ವಧು-ವರರ ಜನನ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಿದೆ. ಮೇ 14ರ ಅಕ್ಷಯ ತೃತೀಯ ಮತ್ತು ಮೇ 26ರ ಪೀಪಲ ಪೂರ್ಣಿಮಾ ದಿನಗಳು ವಿವಾಹಕ್ಕೆ ಶುಭ ಮುಹೂರ್ತ ವಾಗಿದ್ದು, ಸಾಮೂಹಿಕ ವಿವಾಹಗಳ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ನಡೆಯುತ್ತವೆ.
ಈ ವೇಳೆ ಬಾಲ್ಯ ವಿವಾಹಗಳು ಆಗುತ್ತವೆ. ಇದನ್ನು ತಡೆಯಲು ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ. ಬಾಲ್ಯ ವಿವಾಹ ನಡೆದರೆ ಅದಕ್ಕೆ ಪಾಲಕರು, ಆಯೋಜಕರು, ಮದುವೆಗೆ ಬಂದವರೂ ಹೊಣೆಗಾರರಾಗುತ್ತಾರೆ. ಬಾಣಸಿಗರು, ವಾದ್ಯಗಾರರು, ಪುರೋಹಿತರು, ಟೆಂಟ್ ಮಾಲೀಕರು ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.