

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೋಮಿಯೋ ವಿರೋಧಿ ಪಡೆಯನ್ನು ತರುತ್ತೇವೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ತಿರುಗೇಟು ನೀಡಿದ್ದಾರೆ.
ಟ್ವೀಟ್ ಮೂಲಕ ಟೀಕಾ ಪ್ರಹಾರ ನಡೆಸಿರುವ ಮಹುವಾ ಮೊಯಿತ್ರಾ, ಅಜಯ್ ಬಿಸ್ತ್ ಅಲಿಯಾಸ್ ಸಿಎಂ ಯೋಗಿ ಅವರು ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರೋಮಿಯೋ ವಿರೋಧಿ ಪಡೆ ತರುವುದಾಗಿ ಹೇಳಿದ್ದಾರೆ. ಗುಡ್ಡೂಜೀ ನಿಮಗಿಂತಲೂ ಭಿನ್ನವಾಗಿ ನಾವು ಪಶ್ಚಿಮ ಬಂಗಾಳದವರು. ಹೃದಯದಿಂದ ನಾವು ಪ್ರೀತಿಯುಳ್ಳವರು. ನಾವು ಸಂಗೀತ ಆರಾಧಕರು, ನಮ್ಮ ಕವಿತೆ ಹಾಗೂ ನಮ್ಮ ರೋಮಿಯೋಗಳನ್ನು ಸಹ ನಾವು ಇಷ್ಟಪಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಹೂಗ್ಲಿ ಜಿಲ್ಲೆಯ ಕೃಷ್ಣರಾಂಪುರ್ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ್ದ ಸಿಎಂ ಯೋಗಿ, ಬಿಜೆಪಿ ಅಧಿಕಾರಕ್ಕೆ ಬಂದರೆ, ನಮ್ಮ ಮಕ್ಕಳ ಮತ್ತು ಸಹೋದರಿಯರ ಸುರಕ್ಷತಾ ದೃಷ್ಟಿಯಿಂದಾಗಿ ಉತ್ತರ ಪ್ರದೇಶದ ಮಾದರಿಯಲ್ಲಿಯೇ ರೋಮಿಯೋ ವಿರೋಧಿ ಪಡೆಯನ್ನು ಬಂಗಾಳದಲ್ಲೂ ತರುತ್ತೇವೆ. ಈ ಮೂಲಕ ಟಿಎಂಸಿ ರೋಡ್ ರೋಮಿಯೋಗಳನ್ನು ಕಂಬಿ ಹಿಂದೆ ಹಾಕುತ್ತೇವೆ ಎಂದು ಹೇಳಿದ್ದರು.
ಉತ್ತರ ಪ್ರದೇಶದಲ್ಲಿ 2017ರಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮಹಿಳೆಯರ ಸುರಕ್ಷತೆಗಾಗಿ ರೋಮಿಯೋ ವಿರೋಧಿ ಪಡೆಯನ್ನು ಜಾರಿಗೆ ತರಲಾಗಿದೆ. (ಏಜೆನ್ಸೀಸ್)