

ಚಿಕ್ಕಮಗಳೂರು: ಶ್ರೀರಾಮ ಸೇನೆಯಿಂದ ನ.26ರಂದು ನಡೆಯಲಿರುವ ಈ ಬಾರಿಯ ದತ್ತಮಾಲೆ ಆಭಿಯಾನ ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಕಾರ್ಯಕರ್ತರಿಗೆ ತಿಳಿಸಿದರು.
ಶ್ರೀಗುರು ದತ್ತಾತ್ರೇಯ ಪೀಠದಲ್ಲಿ ಶ್ರೀ ರಾಮ ಸೇನೆ ನಡೆಸುವ ದತ್ತಮಾಲೆ ಅಭಿಯಾನ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದರು.
ಕರೊನಾ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಈ ಬಾರಿ ಕನಿಷ್ಠ 100 ಜನ ಸೇರಲು ಅವಕಾಶವಿದೆ. ದತ್ತಮಾಲೆಯಲ್ಲಿ ಭಾಗವಹಿಸುವ ಎಲ್ಲರೂ ಕಡ್ಡಾಯವಾಗಿ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವಂತೆ ತಿಳಿಸಿದರು. ಮೆರವಣಿಗೆ, ಶೋಭಾಯಾತ್ರೆಗೆ ಅವಕಾಶವಿಲ್ಲ. ಬೆಟ್ಟಕ್ಕೆ ದೊಡ್ಡ ಚಾಸ್ಸಿಯ ಬಸ್ಗಳಲ್ಲಿ ತೆರಳದೆ ಲಘು ವಾಹನಗಳಲ್ಲಿ ತೆರಳಬೇಕು ಎಂದರು.
ಬೆಟ್ಟದಲ್ಲಿ 26ರಂದು ತಾತ್ಕಾಲಿಕ ಆಸ್ಪತ್ರೆ ತೆರೆದು ಅಗತ್ಯ ಔಷಧ ಹಾಗೂ ಆಂಬುಲೆನ್ಸ್ಗಳೊಂದಿಗೆ ವೈದ್ಯಾಧಿಕಾರಿಗಳನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಡಿಸಿ ತಿಳಿಸಿದರು. ತಾತ್ಕಾಲಿಕ ಆಸ್ಪತ್ರೆಯ ಆವರಣಕ್ಕೆ ಸುಣ್ಣ-ಬಣ್ಣ ಬಳಿಯುವುದು, ಅವಶ್ಯವಿರುವ ಕಡೆ ಬ್ಯಾರಿಕೇಡ್ ಹಾಕಬೇಕು. ಸಿಸಿ ಟಿವಿ ದುರಸ್ತಿ ಮಾಡುವಂತೆ ನಿರ್ವಿುತಿ ಕೇಂದ್ರದ ಅಧಿಕಾರಿಗೆ ಸೂಚಿಸಿದರು.
ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ, ಗಾಳಿಕೆರೆ ಹಾಗೂ ಮಾಣಿಕ್ಯಧಾರಕ್ಕೆ ತೆರಳುವ ರಸ್ತೆ ದುರಸ್ತಿಪಡಿಸುವಂತೆ ಪಂಚಾಯತ್ರಾಜ್ ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ನಗರಸಭೆ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಎಸ್ಪಿ ಎಂ.ಎಚ್.ಅಕ್ಷಯ್ ಮಾತನಾಡಿ, ಬೆಟ್ಟಕ್ಕೆ ತೆರಳುವ ವಾಹನಗಳು ಅನುಮತಿ ಪಡೆಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಬ್ಯಾನರ್, ಫ್ಲೆಕ್ಸ್ ಹಾಕಲು ಅವಕಾಶವಿಲ್ಲ. ನಗರಸಭೆ ಆಯುಕ್ತರು ಸೂಚಿಸಿದ 5 ಕಡೆ ಬ್ಯಾನರ್ ಕಟ್ಟಲು ಅವಕಾಶ ನೀಡಲಾಗುವುದು. ನ.26ರಂದು ಬಾಬಾಬುಡನ್ ಗಿರಿಗೆ ಪ್ರವಾಸಿಗರು ಬರುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಪದಾಧಿಕಾರಿಗಳು ಬಾರದಂತೆ ಸೂಚನೆ ನೀಡಲಾಗಿದೆ. ಅಂದು ಆಯಾ ಜಿಲ್ಲೆಗಳಲ್ಲಿ ದತ್ತಮಾಲೆ ಧರಿಸಿ ಆಯಾ ಜಿಲ್ಲೆಗಳಲ್ಲೇ ವಿಸರ್ಜಿಸುವಂತೆ ತಿಳಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಹಾಗೂ ಜಿಲ್ಲಾಡಳಿತದ ನಿರ್ಣಯದಂತೆ ಈ ಬಾರಿ ಶೋಭಾಯಾತ್ರೆ ಮಾಡುವುದಿಲ್ಲ. ಜಿಲ್ಲೆಯಿಂದ 100 ಜನ ಪೀಠಕ್ಕೆ ತೆರಳಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಡಾ. ಕುಮಾರ್, ಉಪ ವಿಭಾಗಾಧಿಕಾರಿ ರೇಣುಕಾಪ್ರಸಾದ್, ಡಿಎಚ್ಒ ಡಾ. ಉಮೇಶ್ ಸಭೆಯಲ್ಲಿದ್ದರು.
EndFragment