ದತ್ತಾಂಶ ಗೌಪ್ಯತೆ ನಾವೇನು ಮಾಡಬೇಕು?

3-6797c62dae4e8
Published on
ಮೊದಲೆಲ್ಲ ಮಾಹಿತಿಗಳನ್ನು ಬಟವಡೆ ಮಾಡಲು, ಹಂಚಿಕೊಳ್ಳಲು ನಾವೆಲ್ಲ ಅಂಚೆಯವನನ್ನೇ ಅವಲಂಬಿಸಿದ್ದೆವು. ಕಾಲ ಸರಿದಂತೆ ತಂತ್ರಜ್ಞಾನ ಬೆಳೆದಂತೆ ಅಂಚೆಯವನ ಬದಲಾಗಿ ನಮ್ಮೆಲ್ಲರ ಕೈಯಲ್ಲೀಗ ಜಂಗಮವಾಣಿ ಅಂದರೆ ಮೊಬೈಲ್ ಫೋನ್ ಆ ಕೆಲಸ ಮಾಡುತ್ತಿದೆ.

ಯಾವುದೇ ಸಮಯದಲ್ಲಿ ಕೂಡಲೇ ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ ಮಾಹಿತಿಗಳನ್ನು ಹಂಚಿಕೊಳ್ಳಬಹುದು ಹಾಗೂ ಪಡೆಯಬಹುದು. ತಂತ್ರಜ್ಞಾನ ಮನೆಯ ಮೂಲೆಗಳನ್ನು ಬಿಡದೇ ಆವರಿಸಿಕೊಂಡಿದ್ದರಿಂದ ಪ್ರತಿಯೊಬ್ಬನೂ ವಿಜ್ಞಾನದ ಆವಿಷ್ಕಾರಗಳ ಲಾಭವನ್ನು ಪಡೆಯಬೇಕೆನ್ನುವವನೆ. ಸೌಲಭ್ಯ ಪಡೆಯುವ ಆತುರದಲ್ಲಿ ಆತ ತನ್ನ ಖಾಸಗಿ ಮಾಹಿತಿಗಳನ್ನು ಪಣಕ್ಕೆ ಇಡುತ್ತಿದ್ದಾನೆಂದರೆ ತಪ್ಪಾಗಲಿಕ್ಕಿಲ್ಲ.

ಆನ್​ಲೈನ್ ಸೇವೆಗಳು ಪ್ರಾರಂಭವಾದಾಗಿನಿಂದ ಈ ವೈಯಕ್ತಿಕ ಡೇಟಾ ಅಂದರೆ ಮಾಹಿತಿಗಳ ಸಂರಕ್ಷಣೆ ಹಾಗೂ ಗೌಪ್ಯತೆ ಎಲ್ಲರಿಗೂ ಒಂದು ಸವಾಲಾಗಿದೆ. ಉದಾಹರಣೆಗೆ, ಹಸಿವಾದಾಗ ನಮಗೆಲ್ಲ ಹಿಂದೆ ನೆನಪಾಗುತ್ತಿದ್ದವಳು ನಮ್ಮಮ್ಮ. ಆದರೆ ಈಗ ಮನೆಯ ಹೊಸ್ತಿ್ತಗೆ ಊಟ ತಂದುಕೊಡುವ ಆನ್​ಲೈನ್ ಸೇವಾಕರ್ತರು. ನಾವು ನಮ್ಮ ಮೊಬೈಲ್ ಫೋನ್​ನಲ್ಲಿ ಅವರ ತಂತ್ರಾಂಶವನ್ನು ಅಳವಡಿಸಿಕೊಂಡ ನಂತರ ಸೇವೆ ಪಡೆಯಲು ನಮ್ಮ ಎಲ್ಲ ವೈಯಕ್ತಿಕ ವಿವರಗಳನ್ನು, ಬ್ಯಾಂಕ್ ಖಾತೆಗಳ ವಿವರಗಳನ್ನು ಅಲ್ಲದೆ ನಾವು ವಾಸಿಸುವ ವಿಳಾಸವನ್ನೂ ಹಂಚಿಕೊಳ್ಳುತ್ತೇವೆ.

ನಾವು ಬಯಸುವ ಊಟ, ತಿಂಡಿಗಳ ಮಾಹಿತಿಯೂ ಅವರ ಬಳಿ ಹಂಚಿಕೆಯಾಗುತ್ತದೆ. ಸೇವಾಕರ್ತರಿಂದ ಸೇವೆ ಪಡೆದು ನಾವು ಮರೆತು ಬಿಡುತ್ತೇವೆ. ಆದರೆ ನಾವು ಅವರ ಬಳಿ ಬಿಟ್ಟ ಅಥವಾ ಹಂಚಿಕೊಂಡ ನಮ್ಮೆಲ್ಲ ಮಾಹಿತಿಗಳು ಅವರ ಬಳಿ ಉಳಿದು ಬಿಡುತ್ತವೆ. ಆ ಮಾಹಿತಿಗಳನ್ನು ಅವರು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಥವಾ ಬೇರೊಬ್ಬರಿಗೆ ಉಪಯೋಗಿಸಿಕೊಳ್ಳಲು ಮಾರಾಟ ಮಾಡುವ ಅವಕಾಶಗಳಿರುತ್ತವೆ.

ಅದನ್ನು ನಾವು ನಿರ್ಲಕ್ಷಿಸುತ್ತೇವೆ. ಈ ಪರಿಣಾಮವಾಗಿ ನಾವು ಆನ್​ಲೈನ್ ಅಪರಾಧದ ಸಂತ್ರಸ್ತರಾಗುವುದು. ನಮ್ಮ ಅಜಾಗರೂಕತೆ ಹಾಗೂ ನಿರ್ಲಕ್ಷ ್ಯೇ ನಮ್ಮ ವೈಯಕ್ತಿಕ ಮಾಹಿತಿಯ ಬಹಿರಂಗಕ್ಕೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ ಸೇವೆ, ಸೌಲಭ್ಯಗಳನ್ನು ಪಡೆಯುವ ಭರದಲ್ಲಿ ಇವೆಲ್ಲವನ್ನೂ ಮರೆತು ಬಿಡುತ್ತೇವೆ. ಈ ಕಾರಣಕ್ಕಾಗಿಯೇ ಪಡೆದ ಮಾಹಿತಿಯ ಗೌಪ್ಯತೆಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ನಮ್ಮಿಂದ ವಿವರಗಳನ್ನು ಪಡೆದ ವ್ಯಕ್ತಿಗೆ ಹಾಗೂ ಸಂಸ್ಥೆಗೆ ಸದ್ಯ ಜಾರಿಯಲ್ಲಿರುವ ಕಾನೂನುಗಳು ನೀಡಿವೆ. ಜೊತೆಗೆ, ಎಸಗಿದ ಅಕ್ರಮಗಳಿಗೆ ನಷ್ಟ ತುಂಬಿಕೊಡುವ ಮತ್ತು ಶಿಕ್ಷೆಗಳನ್ನು ಸ್ಪಷ್ಟಪಡಿಸಿವೆ.

ಮಾಹಿತಿ ಮತ್ತು ತಂತ್ರಜ್ಞಾನ ಅಧಿನಿಯಮ 2000ದ ಕಲಂ 43ಅ ಹಾಗೂ 72 ವಿಶೇಷವಾಗಿ ಮಾಹಿತಿ ಗೌಪ್ಯತೆಯ ಹೊಣೆಗಾರಿಕೆ ಹಾಗೂ ನಷ್ಟ ಭರಿಸುವ ಜವಾಬ್ದಾರಿಯನ್ನು ನಿಗದಿಪಡಿಸುತ್ತವೆ. ಕಲಂ 43ಅ ಹೀಗೆ ಹೇಳುತ್ತದೆ- ದತ್ತಾಂಶದ ಸಂರಕ್ಷಣೆಯ ವಿಫಲತೆಗಾಗಿ ಪರಿಹಾರ- ಎಲ್ಲಿ ಒಂದು ಗಣಕಯಂತ್ರ ಸಂಪನ್ಮೂಲದಲ್ಲಿ ತಾನು ಮಾಲೀಕತ್ವ ಹೊಂದಿರುವ, ನಿಯಂತ್ರಿಸುವ ಅಥವಾ ಕಾರ್ಯ ನಡೆಸುವ ಯಾವುದೇ ಸೂಕ್ಷ್ಮ ವೈಯಕ್ತಿಕ ದತ್ತಾಂಶ ಅಥವಾ ಮಾಹಿತಿಯನ್ನು ಹೊಂದುವುದರಲ್ಲಿ, ನಿರ್ವಹಿಸುವುದರಲ್ಲಿ, ವ್ಯವಹರಿಸುವುದರಲ್ಲಿ ಒಂದು ಸಂಸ್ಥೆಯು ಸಕಾರಾತ್ಮಕ, ಸುರಕ್ಷಿತ ಪದ್ಧತಿಗಳನ್ನು ಮತ್ತು ಕಾರ್ಯರೀತಿಯನ್ನು ನಿರ್ವಹಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ ್ಯಾಗಿದೆ ಮತ್ತು ಇದರಿಂದಾಗಿ ಯಾವುದೇ ವ್ಯಕ್ತಿಗೆ ಅಕ್ರಮ ಲಾಭ ಅಥವಾ ಅಕ್ರಮ ಹಾನಿ ಉಂಟಾಗಿದ್ದರೆ ಅಂತಹ ಸಂಸ್ಥೆಯು ಹಾನಿಗೊಳಗಾದ ವ್ಯಕ್ತಿಗೆ ಪರಿಹಾರ ಕೊಡಬೇಕಾದ ಜವಾಬ್ದಾರಿ ಹೊಂದಿರುತ್ತದೆ.

ಈ ನಿಯಮಾನುಸಾರ ನಮ್ಮ ಮಾಹಿತಿಗಳನ್ನು ಸಂರಕ್ಷಿಸದೆ ನಿರ್ಲಕ್ಷಿಸಿ ನಮಗೆ ಹಾನಿಯನ್ನುಂಟು ಮಾಡುವ ವ್ಯಕ್ತಿ ಅಥವಾ ಸಂಸ್ಥೆ ವಿರುದ್ಧ ನಮಗೆ ಪರಿಹಾರ ಕೋರಲು ಕಾನೂನಿನಲ್ಲಿ ಅವಕಾಶವಿದೆ, ಆದರೆ ನಮ್ಮಲ್ಲಿ ಎಷ್ಟು ಜನ ಈ ಬಗ್ಗೆ ಮಾಹಿತಿ ಇದ್ದವರಿದ್ದೇವೆ?

ಕಲಂ 72 ಗೌಪ್ಯತೆ ಮತ್ತು ವೈಯಕ್ತಿಕ ರಹಸ್ಯದ ಉಲ್ಲಂಘನೆಗಾಗಿ ದಂಡ ಹಾಗೂ ಶಿಕ್ಷೆ ವಿಧಿಸುತ್ತ ಹೀಗೆ ಹೇಳುತ್ತದೆ- ಈ ಕಾಯ್ದೆಯಡಿಯಲ್ಲಿ ಅಥವಾ ಪ್ರಸ್ತುತ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನಲ್ಲಿ ಅಥವಾ ಅಧಿನಿಯಮಗಳ ಅಡಿಯಲ್ಲಿ ನೀಡಲಾದ ಯಾವುದೇ ಅಧಿಕಾರವನ್ನು ಅನುಸರಿಸುವಾಗ ಸಂಬಂಧಪಟ್ಟ ವ್ಯಕ್ತಿಯ ಅನುಮತಿಯಿಲ್ಲದೆ ಯಾವುದೇ ವಿದ್ಯುನ್ಮಾನ ದಾಖಲೆ, ಪುಸ್ತಕ, ವಹಿ, ಪತ್ರವ್ಯವಹಾರ, ಮಾಹಿತಿ, ದಾಖಲೆ ಅಥವಾ ಇತರ ವಿಷಯಗಳನ್ನು ಬಹಿರಂಗಪಡಿಸಿದರೆ ಅಂತಹ ಅಪರಾಧಕ್ಕೆ ಎರಡು ವರ್ಷಗಳವರೆಗೆ ಸಜೆ ಅಥವಾ ಒಂದು ಲಕ್ಷ ರೂಪಾಯಿವರೆಗೆ ದಂಡ ಅಥವಾ ಎರಡೂ ದಂಡನೆ ವಿಧಿಸಬಹುದು.

ಈ ಕಲಂಗಳನ್ನು ಗಮನಿಸಿದಾಗ, ಮಾಹಿತಿ ಗೌಪ್ಯತೆಯನ್ನು ಕಾಪಾಡದ ವ್ಯಕ್ತಿ ಅಥವಾ ಸಂಸ್ಥೆ ಎದುರಿಸಬಹುದಾದ ಕಾನೂನಿನ ಸಂಕಷ್ಟಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಆದರೆ ಜನ ಈ ಆನ್​ಲೈನ್ ಅಪರಾಧಗಳಿಗೆ ಬಲಿಯಾಗಿ ಗೋಳಾಡುತ್ತಾರೆಯೇ ಹೊರತು ತಮ್ಮ ಡಾಟಾಗಳನ್ನು ಸೋರಿಕೆ ಮಾಡಿದ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಾನೂನು ಹೋರಾಟ ಮಾಡುವ ಹಾಗೂ ಪರಿಹಾರ ಕಂಡುಕೊಳ್ಳುವ ಬಗ್ಗೆ ಚಿಂತನೆ ಮಾಡುವುದಿಲ್ಲ.

ಜನಸಾಮಾನ್ಯರು ತಮ್ಮ ವೈಯಕ್ತಿಕ ಮಾಹಿತಿಗಳ ಬಗ್ಗೆ ಅಷ್ಟಾಗಿ ಗಂಭೀರವಾಗಿ ಪರಿಗಣಿಸದ ಹಾಗೂ ಆ ಬಗ್ಗೆ ಯೋಚಿಸದ ವರ್ತನೆಗಳನ್ನು ಬಂಡವಾಳವಾಗಿಸಿಕೊಂಡವರಿಗೆ ಕಡಿವಾಣ ಹಾಕಲು ಭಾರತ ಸರ್ಕಾರವು 2023ರಲ್ಲಿ "THE DIGITAL PERSONAL DATA PROTECTION ACT, 2023'’ ಕಾಯ್ದೆಯನ್ನು ಜಾರಿಗೆ ತಂದಿದೆ. ಡಿಜಿಟಲ್ ವೈಯಕ್ತಿಕ ಡೇಟಾವನ್ನು ಕಾನೂನುಬದ್ಧ ಉದ್ದೇಶಗಳಿಗಾಗಿ ಪ್ರಕ್ರಿಯೆಗೊಳಿಸಲು ಅವಕಾಶ ಒದಗಿಸುವುದರ ಜೊತೆ ತಮ್ಮ ವೈಯಕ್ತಿಕ ಡೇಟಾವನ್ನು, ಮಾಹಿತಿಗಳನ್ನು ರಕ್ಷಿಸಲು ಅಂತಹ ಹಕ್ಕುಗಳನ್ನು ಗುರುತಿಸಿ, ಸಂರಕ್ಷಿಸುವ ಸದುದ್ದೇಶವನ್ನು ಈ ಕಾನೂನು ಹೊಂದಿದೆ.

ಈ ಕಾನೂನಿನಡಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಗೌಪ್ಯತೆ ಕಾಪಾಡುವ ವಿಶ್ವಾಸ ಹಾಗೂ ನಂಬಿಕೆ ಆಧಾರದ ಮೇಲೆ ಪಡೆಯುವ ದತ್ತಾಂಶಗಳ ಮಾಹಿತಿಯನ್ನು ಸಂರಕ್ಷಿಸದೆ ಹೋದರೆ ಅಥವಾ ಅವುಗಳನ್ನು ಕಾನೂನು ಬದ್ಧ ಉದ್ದೇಶಗಳಿಗೆ ಬಳಸದೆ ವೈಯಕ್ತಿಕ ಅಕ್ರಮ ಲಾಭಗಳಿಗೆ ಉಪಯೋಗಿಸಿಕೊಂಡರೆ ಸಂತ್ರಸ್ತ ವ್ಯಕ್ತಿಗೆ ಪರಿಹಾರ ಕೊಡಬೇಕಾದ ಬಾಧ್ಯತೆ ಹೊಂದಿರುತ್ತಾನೆ. ಪರಿಹಾರದ ಮೊತ್ತ 150 ಕೋಟಿ ರೂ.ವರೆಗೂ ನಿಗದಿಪಡಿಸುವ ಅವಕಾಶ ಈ ಕಾನೂನಿನಲ್ಲಿದೆ. ಆದರೆ ಎಷ್ಟು ಜನರಿಗೆ ಈ ಕಾನೂನುಗಳ ಮಾಹಿತಿ ಇದೆ? ಅವುಗಳನ್ನು ಬಳಸಿಕೊಂಡು ತಮ್ಮ ಹಕ್ಕುಗಳ ಹಿತರಕ್ಷಣೆ ಮಾಡಿಕೊಳ್ಳುವ ಛಲವಿದೆ?

ನಮ್ಮ ವೈಯಕ್ತಿಕ ಡೇಟಾ ಮಾಹಿತಿ ವಿವರಗಳು ಬಹಳ ಅಮೂಲ್ಯ. ಆದ್ದರಿಂದ, ಸದ್ಯ ಜಾರಿಯಲ್ಲಿ ಇರುವ ಕಾನೂನುಗಳ ಮಾಹಿತಿಗಳನ್ನು ಪಡೆದು ಜಾಗೃತರಾಗಿರುವುದು ಕ್ಷೇಮ. ಮಾಹಿತಿಯನ್ನು ಹಂಚಿಕೊಳ್ಳುವಾಗ ಅವುಗಳ ಸಂರಕ್ಷಣೆ ಕುರಿತಂತೆ ಇರುವ ರಕ್ಷಣಾತ್ಮಕ ಸೌಲಭ್ಯಗಳ ಕಡೆಗೆ ಗಮನ ಕೊಡುವುದು ಅಗತ್ಯ. ನಮ್ಮಿಂದ ವೈಯಕ್ತಿಕ ಮಾಹಿತಿಗಳನ್ನು ಪಡೆಯುವ ವ್ಯಕ್ತಿ ಅಥವಾ ಸಂಸ್ಥೆ ಅವುಗಳನ್ನು ಸಂರಕ್ಷಿಸುವುದರ ಜೊತೆಗೆ ಸೋರಿಕೆಯಾಗದಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿ ಹೊಂದಿರುತ್ತಾನೆ.

ಈ ಹೊಣೆಗಾರಿಕೆಯಲ್ಲಿ ಏನಾದರೂ ಲೋಪವಾಗಿ ಸಂಬಂಧಿಸಿದ ನಮಗೆ ಆರ್ಥಿಕ ಹಾನಿಯುಂಟಾದರೆ, ನಷ್ಟ ತುಂಬಿಕೊಡುವ ಜವಾಬ್ದಾರಿ ಸಹ ಆ ಮಾಹಿತಿಗಳನ್ನು ಪಡೆದ ವ್ಯಕ್ತಿಯದಾಗಿದೆ. ಒಂದು ವೇಳೆ ಮಾಹಿತಿ ಸೋರಿಕೆಯ ಪರಿಣಾಮವಾಗಿ ವಂಚನೆಗೆ ಬಲಿಯಾದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವ ಎದೆಗಾರಿಕೆ ತೋರಿದಾಗ ಮಾತ್ರ ಕಾನೂನುಗಳ ಸದುದ್ದೇಶವನ್ನು ಈಡೇರಿಸುವುದರೆ ಜೊತೆಗೆ ನಮ್ಮ ಹಕ್ಕುಗಳನ್ನು ಸಂರಕ್ಷಿಸುವಂತಾಗುತ್ತದೆ.

ಪೊಲೀಸರಿಗೆ ದೂರು ಕೊಡಿ

ವೈಯಕ್ತಿಕ ಡಾಟಾ ಕಳವು ಅಥವಾ ದುರ್ಬಳಕೆಯಾಗಿರುವುದು ಗೊತ್ತಾದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ. ಪೊಲೀಸರು ಸಂಬಂಧಪಟ್ಟ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ.

(ಲೇಖಕರು ಸಾರ್ವಜನಿಕ ಅಭಿಯೋಜಕರು ಹಾಗೂ ಕಾನೂನು ಸಲಹೆಗಾರರು, ಸಿಐಡಿ ಬೆಂಗಳೂರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net