

ಶಿವಮೊಗ್ಗ: ಶಿವಮೊಗ್ಗದ ಅರ್ಚಕ ವೃಂದ, ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಸಂಸ್ಕೃತೋತ್ಸವ ನಿಮಿತ್ತ ದಶೋಪನಿಷತ್ ಉಪನ್ಯಾಸ ಕಾರ್ಯಕ್ರಮ ಆ.22ರಿಂದ 31ರವರೆಗೆ ಸಂಜೆ 6.30ರಿಂದ ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ ತಿಳಿಸಿದರು.
ಈಗಾಗಲೇ ನಗರದಲ್ಲಿ ಆ.3ರಿಂದ ಸಂಸ್ಕೃತ ಮಾಸೋತ್ಸವ ಆರಂಭಗೊಂಡಿದ್ದು ಅದರ ಭಾಗವಾಗಿ 10 ದಿನ ದಶೋಪನಿಷತ್ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಪ್ರತಿದಿನವೂ ಒಬ್ಬೊಬ್ಬ ವಿದ್ವಾಂಸರಿಂದ ವಿಶೇಷ ಉಪನ್ಯಾಸ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗಿನ ಕಾಲಕ್ಕೆ ಉಪನಿಷತ್ತುಗಳನ್ನು ಓದುವವರ ಸಂಖ್ಯೆ ಕಡಿಮೆ. ಆದ್ದರಿಂದ ಉಪನಿಷತ್ತುಗಳಲ್ಲಿ ಏನಿದೆ ಎಂಬುದೇ ರಹಸ್ಯವಾಗಿದೆ. ಉಪನಿಷತ್ತುಗಳಲ್ಲಿ ಹೇಳಿದ ವಿಚಾರಗಳನ್ನು ತಿಳಿದುಕೊಳ್ಳುವ ಮನಸ್ಸು ಬೇಕು. ಅಂತಹ ಮನಸ್ಸಿದ್ದರೆ ಮಕ್ಕಳಿಂದ ವಯಸ್ಕರವರೆಗೂ ತಿಳಿದುಕೊಳ್ಳಬಹುದು. ಹಾಗೆ ಉಪನಿಷತ್ತಿನಲ್ಲಿ ಆಸಕ್ತಿ ಬೆಳೆಸಲು ಅವುಗಳ ಒಂದಷ್ಟು ಪರಿಚಯವನ್ನು ಈ ದಶೋಪನಿಷತ್ ಮೂಲಕ ಮಾಡಿಸಲಾಗುವುದು ಎಂದರು.
ಆ.22ರಂದು ಬೃಹದಾರಣ್ಯಕೋಪನಿಷತ್ ಕುರಿತು ಕುಷ್ಠಗಿ ವಾಸುದೇವಮೂರ್ತಿ, 23ರಂದು ಐತೇರಿಯೋಪನಿಷತ್ ಕುರಿತು ವಿದ್ವಾನ್ ಮಹೀಪತಿ, 24ರಂದು ಮಾಂಡಕ್ಯೋಪನಿಷತ್ ಕುರಿತು ವಿದ್ವಾನ್ ಹಂದಲಸು ರಾಘವೇಂದ್ರ ಭಟ್ಟ, 25ರಂದು ಈಶಾವಾಸ್ಯ ಕುರಿತು ಹಂದಲಸು ವಾಸುದೇವ ಭಟ್ಟ, 26ರಂದು ಕೇನೋಪನಿಷತ್ ಕುರಿತು ವಿದ್ವಾನ್ ಮಧುಸೂದನ್ ಆಡಿಗರು ಉಪನ್ಯಾಸ ನೀಡುವರು ಎಂದರು.
27ರಂದು ಪ್ರಶ್ನೋಪನಿಷತ್ ಕುರಿತು ವಿದ್ವಾನ್ ಮಧುಸೂದನ ಆಡಿಗರು, 28ರಂದು ಕಠೋಪನಿಷತ್ ಕುರಿತು ವಿದ್ವಾನ್ ಎಚ್.ಆರ್.ವಾಸುದೇವ, 29ರಂದು ತೈತ್ತೀರಯಾ ಕುರಿತು ಎಂ.ಎಸ್.ವಿನಾಯಕ, 30ರಂದು ಛಾಂದೋಗ್ಯ ಕುರಿತು ವಿದ್ವಾನ್ ಅಚ್ಯುತ ಅವದಾನಿ ಮತ್ತು 31ರಂದು ಮುಂಡಕೋಷನಿಷತ್ ಕುರಿತು ವಿದ್ವಾನ್ ಡಾ. ಸನತ್ಕುಮಾರ ಅವರು ಉಪನ್ಯಾಸ ನೀಡುವರು ಎಂದು ಹೇಳಿದರು. ಸಂಸ್ಕೃತ ಭಾರತಿ ಜಿಲ್ಲಾಧ್ಯಕ್ಷ ಎನ್.ವಿ.ಶಂಕರನಾರಾಯಣ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಉಪಾಧ್ಯಕ್ಷ ಡಾ. ವ್ನಿೇಶ್, ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್ ಸುದ್ದಿಗೋಷ್ಠಿಯಲ್ಲಿದ್ದರು.