

ಬೆಂಗಳೂರು: ಹೊಯ್ಸಳ ವಾಹನಗಳಿಗೆ ಅಳವಡಿಸಿದ್ದ ಡ್ಯಾಶ್‌ಬೋರ್ಡ್ ಕ್ಯಾಮರಾಗಳನ್ನು ಇನ್‌ಸ್ಪೆಕ್ಟರ್ ಮತ್ತು ಎಸಿಪಿ ಜೀಪ್‌ಗಳಿಗೂ ವಿಸ್ತರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ನಗರದಲ್ಲಿ ಇರುವ 241 ಹೊಯ್ಸಳ ವಾಹನಗಳಿಗೆ ಡ್ಯಾಶ್‌ಬೋರ್ಡ್ ಕ್ಯಾಮರಾ ಅಳವಡಿಸಲಾಗಿದೆ.
ಇದೀಗ ಹೆಚ್ಚುವರಿಯಾಗಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ಮತ್ತು ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ವಾಹನಗಳಿಗೂ ಅಳವಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಪ್ರಕಾರ 500 ವಾಹನಗಳಿಗೆ 10 ದಿನಗಳಲ್ಲಿ ಕ್ಯಾಮರಾ ಅಳವಡಿಕೆ ಪೂರ್ಣವಾಗಲಿದೆ ಎಂದರು.
ಹೊಯ್ಸಳ ಮತ್ತು ಅಧಿಕಾರಿಗಳ ವಾಹನಗಳು ರಸ್ತೆಯಲ್ಲಿ ಸಂಚರಿಸುವಾಗ ಪ್ರತಿಯೊಂದು ಘಟನೆ ಸೆರೆಯಾಗಲಿದೆ. ಪೊಲೀಸ್ ಕಂಟ್ರೋಲ್ ರೂಮ್ 112ಗೆ ಬರುವ ತುರ್ತು ಕರೆಗಳ ಸಂಖ್ಯೆಯೂ ದಿನೇದಿನೆ ಹೆಚ್ಚಾಗುತ್ತಿವೆ. ಪೊಲೀಸರು ಸ್ಥಳಕ್ಕೆ ತೆರಳುವಾಗ ನೈಜ ಘಟನೆಗಳು ಕ್ಯಾಮರಾದಲ್ಲಿ ಸೆರೆ ಆಗುವುದರಿಂದ ತನಿಖೆಗೆ ಸಾಕಷ್ಟು ಅನುಕೂಲ ಆಗಲಿದೆ. ಇದಲ್ಲದೆ, ಬಾಡಿವೋರ್ನ್ ಕ್ಯಾಮರಾಗಳ ಬಳಕೆಯೂ ಉಪಯುಕ್ತವಾಗಿವೆ. ಇದರಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಜವಾಬ್ದಾರಿ ಹೆಚ್ಚಾಗಲಿವೆ ಎಂದು ವಿವರಿಸಿದರು.
ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಡ್ಯಾಶ್‌ಕ್ಯಾಮ್ ಉತ್ತೇಜಿಸುತ್ತದೆ. ಸಾರ್ವಜನಿಕರು ತಮ್ಮ ವಾಹನಗಳಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮರಾಗಳನ್ನು ಅಳವಡಿಸಿಕೊಂಡಿದ್ದು, ಇದು ಸ್ವಾಗತಾರ್ಹ. ರಸ್ತೆಯಲ್ಲಿ ಅಪಘಾತಗಳು ಅಥವಾ ಅಹಿತಕರ ಘಟನೆಗಳ ನಡೆದಾಗ ಆರೋಪಿಗಳ ಪತ್ತೆಗೂ ಸಹಾಯವಾಗಲಿದೆ ಎಂದು ಬಿ. ದಯಾನಂದ್ ವಿಶ್ವಾಸ ವ್ಯಕ್ತಪಡಿಸಿದರು.