ಕಂಚಿವರದರಾಜ ಸ್ವಾಮಿಯ ನಾಮಧಾರಣೆ

dj hsd ambinothsava
Published on

ಹೊಸದುರ್ಗ: ತಾಲೂಕಿನ ದಶರಥ ರಾಮೇಶ್ವರಸ್ವಾಮಿ ವಜ್ರದಲ್ಲಿ ಕಂಚಿವರದರಾಜ ಸ್ವಾಮಿ ಉತ್ತರೆ ಮಳೆ ಅಂಬಿನೋತ್ಸವದ ಅಂಗವಾಗಿ ಮಂಗಳವಾರ ಗಂಗಾಸ್ನಾನ ಹಾಗೂ ನಾಮಧಾರಣೆ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಉತ್ಸವದ ಪೂರ್ವಭಾವಿಯಾಗಿ ಸೋಮವಾರ ಕಂಚೀಪುರದ ದೇವಾಲಯದಿಂದ ಬುತ್ತಿಬಾನದೊಂದಿಗೆ ಉತ್ತರೆ ಬೆಟ್ಟಕ್ಕೆ ತೆರಳಿ ಸಿದ್ದೇಶ್ವರ ಸ್ವಾಮಿಗೆ ಬುತ್ತಿಬಾನ ಸಮರ್ಪಿಸಲಾಯಿತು.

ರಾತ್ರಿ ಬಿಲ್ಲು ಬಾಣದಿಂದ ಅಂಬು ಛೇದಿಸುವ ಮೂಲಕ ಅಂಬಿನೋತ್ಸವ ಸಾಂಗವಾಗಿ ನಡೆಯಿತು.

ದಶರಥ ರಾಮೇಶ್ವರ ವಜ್ರಕ್ಕೆ ಹಿಂತಿರುಗಿದ ಕಂಚಿವರದರಾಜ ಸ್ವಾಮಿಗೆ ಉತ್ತರೆ ಮಳೆ ನೀರಿನಿಂದ ತುಂಬಿದ ಕೊಳದಲ್ಲಿ ಧಾರ್ಮಿಕ ವಿಧಿ ವಿಧಾನದಂತೆ ಗಂಗಾಭಿಷೇಕ ನಡೆಯಿತು.

ಸಂಪ್ರದಾಯದಂತೆ ದೇವರ ಹಣೆಗೆ ವಿಶೇಷ ನಾಮಧಾರಣೆ ಮಾಡಲಾಯಿತು.

ನೂತನ ನಾಮಧಾರಿಯಾಗಿ ದೇವಾಲಯದ ಪ್ರಧಾನ ಆರ್ಚಕರ ತಲೆಯನೇರಿ ಗಂಗಾಕೊಳದಿಂದ ಹೊರಬಂದ ಕಂಚೀವರದರಾಜ ಸ್ವಾಮಿಯ ಮೇಲೆ ದೇವರ ಆಗಮನಕ್ಕಾಗಿ ಕಾಯ್ದು ನಿಂತಿದ್ದ ಭಕ್ತರು ಲಕ್ಷಾಂತರ ಮೌಲ್ಯದ ನಾಣ್ಯಗಳನ್ನು ತೂರಿ ಭಕ್ತಿ ಸಮರ್ಪಿಸಿದರು.

ದಶರಥರಾಮೇಶ್ವರ ಸ್ವಾಮಿಯ ದೇವಾಲಯಕ್ಕೆ ತೆರಳಿದ ಕಂಚಿವದರಾಜ ಸ್ವಾಮಿ, ದಶರಥ ರಾಮೇಶ್ವರನಿಗೆ ಪೂಜೆ ಸಲ್ಲಿಸಿದ ನಂತರ ಮಂಟಪದವರಗೆ ಮೆರವಣಿಗೆಯಲ್ಲಿ ಸಾಗಿಬಂತು.

ರಥಬೀದಿಯ ಎರಡು ಕಡೆಗಳಲ್ಲಿ ನಿಂತಿದ್ದ ಭಕ್ತರು ದೇವರ ಮೇಲೆ ನಾಣ್ಯದ ಸುರಿಮಳೆಗರೆದರು. ನಾಮಧಾರಣೆ ನಂತರ ಭಕ್ತರಿಗೆ ಬುತ್ತಿಬಾನದ ಪ್ರಸಾದ ಹಂಚಲಾಯಿತು. ಧಾರ್ಮಿಕ ವಿಧಿ ವಿಧಾನಗಳ ನಂತರ ಅನ್ನದಾಸೋಹ ನಡೆಯಿತು.

ನಾಮಧಾರಣೆ ವಿಶೇಷ: ಬಹುತೇಕ ದೇವಾಲಯಗಳಲ್ಲಿ ದೇವರುಗಳಿಗೆ ಪ್ರತಿ ದಿನ ನಾಮಧಾರಣೆ ಮಾಡಲಾಗುತ್ತದೆ. ಆದರೆ ಕಂಚಿವರದರಾಜ ಸ್ವಾಮಿಗೆ ಮಾತ್ರ ವರ್ಷದಲ್ಲಿ ಒಂದು ಬಾರಿ ಮಾಡುವ ಪದ್ಧತಿಯಿದೆ.

ಉತ್ತರೆ ಮಳೆಯ ಅಂಬಿನೋತ್ಸವದ ಸಂದರ್ಭದಲ್ಲಿ ಗಂಗಾಸ್ನಾನ ಮಾಡಿಸಿ ಈ ಶಾಸ್ತ್ರ ನಡೆಸಲಾಗುತ್ತದೆ. ಅದೇ ನಾಮ ಒಂದು ವರ್ಷಗಳ ಕಾಲ ದೇವರ ಹಣೆಯ ಮೇಲಿರುತ್ತದೆ.

ನಾಣ್ಯ ತೂರುವ ಹರಕೆ: ಕಂಚಿವರದರಾಜ ಸ್ವಾಮಿಯ ಮೇಲೆ ಭಕ್ತರು ನಾಣ್ಯಗಳನ್ನು ತೂರಿ ಭಕ್ತಿ ಸಮರ್ಪಿಸುತ್ತಾರೆ. ಇಷ್ಟಾರ್ಥಗಳ ಈಡೇರಿಕೆಗೆ ನಾಣ್ಯಗಳನ್ನು ಸಮರ್ಪಿಸುವುದಾಗಿ ಹರಕೆ ಮಾಡಿಕೊಳ್ಳುವುದು ಇಲ್ಲಿನ ಸಂಪ್ರದಾಯ.

ಜಾತ್ರೆಗೆ ಬರುವ ಭಕ್ತರು ದೇವರ ಮೂರ್ತಿಯ ಮೇಲೆ ನಾಣ್ಯ ತೂರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net