Dasara Holiday: ಮಕ್ಕಳಿಗೆ ದಸರಾ ರಜೆ ಅಂದ್ರೆ ಸಿಕ್ಕಾಪಟ್ಟೆ ಖುಷಿ.. ಶಾಲೆಗೆ ರಜೆ ಸಿಕ್ಕ ತಕ್ಷಣ ಮೊಬೈಲ್, ಟಿವಿ, ಗೇಮ್ಸ್‌ನಲ್ಲಿ ದಿನ ಕಳೆಯುವ ಬದಲು, ಈ ರಜೆಯಲ್ಲಿ ಹೊಸ ವಿಷಯ ಕಲಿಯಲು, ಆಟವಾಡಲು ಹಾಗೂ ಕುಟುಂಬದ ಜತೆ ಸಮಯ ಕಳೆಯಲು ಅವಕಾಶ ಮಾಡಿಕೊಡಿ. ಮಕ್ಕಳ ಆಸಕ್ತಿಗೆ ತಕ್ಕಂತೆ ಸಣ್ಣ ಪ್ಲಾನ್ ಮಾಡಿದರೆ ರಜೆ ಇನ್ನಷ್ಟು ಮಜಾವಾಗುತ್ತದೆ.
ಮಕ್ಕಳನ್ನು ಮೈಸೂರು ದಸರಾ, ಗೊಂಬೆ ಹಬ್ಬ, ಮ್ಯೂಸಿಯಂ, ವಿಜ್ಞಾನ ಕೇಂದ್ರ ಅಥವಾ ಐತಿಹಾಸಿಕ ಸ್ಥಳಗಳಿಗೆ ಕರೆದುಕೊಂಡು ಹೋಗಬಹುದು. ನೇರವಾಗಿ ನೋಡಿದಾಗ ಮಕ್ಕಳಿಗೆ ಹೊಸ ವಿಷಯಗಳು ಸುಲಭವಾಗಿ ಅರ್ಥವಾಗುತ್ತವೆ.
ಚಿತ್ರಕಲೆ, ಮಣ್ಣಿನ ಕಲಾಕೃತಿ, ಈಜು, ಕರಾಟೆ, ನೃತ್ಯದಂತಹ ಮಕ್ಕಳಿಗೆ ಇಷ್ಟವಾದ ಚಟುವಟಿಕೆಗಳನ್ನು ಕಲಿಸಬಹುದು. ರಜೆಯಲ್ಲೇ ಹೊಸ ಕೌಶಲ್ಯವೊಂದನ್ನು ಕಲಿತಂತಾಗುತ್ತದೆ.
ಸ್ಯಾಂಡ್‌ವಿಚ್, ಫ್ರೂಟ್ ಸಲಾಡ್‌ನಂತಹ ಸರಳ ತಿನಿಸುಗಳನ್ನು ಮಕ್ಕಳಿಂದಲೇ ಮಾಡಿಸಬಹುದು. ಇದರಿಂದ ಅಡುಗೆ ಬಗ್ಗೆ ಆಸಕ್ತಿ ಜೊತೆಗೆ ಸ್ವಾವಲಂಬನೆಯೂ ಬೆಳೆಯುತ್ತದೆ.
ಹತ್ತಿರದ ಲೈಬ್ರರಿಗೆ ಕರೆದುಕೊಂಡು ಹೋಗಿ, ಮಕ್ಕಳೇ ತಮ್ಮ ವಯಸ್ಸಿಗೆ ತಕ್ಕ ಕಥೆ ಪುಸ್ತಕ ಆಯ್ಕೆ ಮಾಡಿಕೊಳ್ಳುವಂತೆ ಮಾಡಿ. ರಜೆಯಲ್ಲಿ ಓದುವ ಅಭ್ಯಾಸ ಬೆಳೆಸಲು ಇದು ಒಳ್ಳೆಯ ಸಮಯ.
ಮಕ್ಕಳನ್ನು ಜಮೀನಿಗೆ ಕರೆದುಕೊಂಡು ಹೋಗಿ ಗಿಡ ನೆಡುವುದು, ನೀರು ಹಾಕುವುದು, ಬೆಳೆಗಳ ಬಗ್ಗೆ ತಿಳಿದುಕೊಳ್ಳುವಂತಹ ಚಟುವಟಿಕೆಗಳಲ್ಲಿ ತೊಡಗಿಸಬಹುದು. ಪಕ್ಷಿ, ಪ್ರಾಣಿಗಳನ್ನು ಗಮನಿಸುವ ಅಭ್ಯಾಸವನ್ನೂ ಬೆಳೆಸಬಹುದು.
ಲಗೋರಿ, ಬುಗುರಿ, ಚಿನ್ನಿ ದಾಂಡು, ಕವಡೆ, ಗೋಲಿಯಂತಹ ಸಾಂಪ್ರದಾಯಿಕ ಆಟಗಳನ್ನು ಆಡಿಸಬಹುದು. ಮಜಾ ಜೊತೆಗೆ ಮಕ್ಕಳಿಗೆ ಉತ್ತಮ ದೈಹಿಕ ಚಟುವಟಿಕೆಯೂ ಸಿಗುತ್ತದೆ.
ಡಿಜಿಟಲ್ ಲೈಬ್ರರಿ ಅಥವಾ ಕಂಪ್ಯೂಟರ್ ಕೇಂದ್ರಗಳಲ್ಲಿ ಟೈಪಿಂಗ್, ಮೂಲ ಕಂಪ್ಯೂಟರ್ ಜ್ಞಾನ ಮತ್ತು ಇಂಗ್ಲಿಷ್ ಸಂವಹನದಂತಹ ಕೌಶಲ್ಯಗಳನ್ನು ಕಲಿಯಬಹುದು.
ಒಣ ಎಲೆ, ಹೂವು, ತೆಂಗಿನ ಗರಿ, ಮಣ್ಣಿನಂತಹ ವಸ್ತುಗಳನ್ನು ಬಳಸಿ ಕರಕುಶಲ ವಸ್ತುಗಳನ್ನು ತಯಾರಿಸಬಹುದು. ಇದರಿಂದ ಮಕ್ಕಳ ಕ್ರಿಯೇಟಿವಿಟಿಗೂ ಅವಕಾಶ ಸಿಗುತ್ತದೆ.
ಈ ದಸರಾ ರಜೆಯಲ್ಲಿ ಸಾಧ್ಯವಾದರೆ ‘ರೂಟ್ಸ್ ಎಕ್ಸ್‌ಚೇಂಜ್’ ಮಾಡಬಹುದು. ಸಿಟಿ ಮಕ್ಕಳನ್ನು ಹಳ್ಳಿಗೆ ಕರೆದುಕೊಂಡು ಹೋಗಿ ಕೃಷಿ, ಗ್ರಾಮೀಣ ಜೀವನ ಪರಿಚಯಿಸಬಹುದು. ಹಳ್ಳಿ ಮಕ್ಕಳನ್ನು ನಗರಕ್ಕೆ ಕರೆತಂದು ಮೆಟ್ರೋ, ಮ್ಯೂಸಿಯಂ, ಪಾರ್ಕ್‌ಗಳಂತಹ ಸ್ಥಳಗಳನ್ನು ತೋರಿಸಬಹುದು.
ಇದನ್ನೂ ಓದಿ: ಮಾವನ ಕೊಲೆಗೆ ಸೊಸೆಯ ಪಾರ್ಟಿ ಸಂಚು? ಫೋನ್‌ನಲ್ಲೇ ಆರೋಪಿಗಳಿಗೆ ಗೈಡ್! Kanpur Murder
ಹೀಗೆ ಮಾಡಿದರೆ ದಸರಾ ರಜೆ ಮೊಬೈಲ್, ಟಿವಿ ಮುಂದೆ ಕಳೆಯುವ ದಿನಗಳಾಗದೆ, ಮಕ್ಕಳಿಗೆ ಹೊಸ ಅನುಭವ, ಹೊಸ ಕೌಶಲ್ಯ ಮತ್ತು ಹೊಸ ವಿಷಯಗಳನ್ನು ಕಲಿಯುವ ಮಜಾದ ರಜೆಯಾಗುತ್ತದೆ.