

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ (Mysuru Dasara 2024) ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಆನೆ ‘ಅಭಿಮನ್ಯು’ (Abhimanyu) ತೂಕ ಹೆಚ್ಚಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾನೆ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಅಂತಿಮ ತೂಕ ಪರೀಕ್ಷೆಯಲ್ಲಿ ಅಭಿಮನ್ಯು ಇತರ ಆನೆಗಳಿಂದ ಹೆಚ್ಚು ತೂಕ ಹೊಂದುವ ಮೂಲಕ ತಾನೇ ಬಲಿಷ್ಠ ಎನ್ನುವುದನ್ನು ತೋರಿಸಿದ್ದಾನೆ. ಮೊದಲ ಹಂತದ ತೂಕ ಪರೀಕ್ಷೆಯಲ್ಲಿ 5560 ಕೆ.ಜಿ. ತೂಕ ಹೊಂದಿದ್ದ ಅಭಿಮನ್ಯು, ಒಂದು ತಿಂಗಳ ಅಂತರದಲ್ಲಿ 260 ಕೆ.ಜಿ. ತೂಕ ಹೆಚ್ಚಿಸಿಕೊಂಡು 5820 ಕೆ.ಜಿ. ಇದ್ದಾನೆ.
ದಸರಾ ಗಜಪಡೆಯ ಅಂತಿಮ ಹಂತದ ತೂಕ ಪರೀಕ್ಷೆಯನ್ನು ನಗರದ ಸಾಯಿರಾಂ ತೂಕ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಯಿತು. ಲಕ್ಷ್ಮೀ ಆನೆ 2625(2480 ಬಂದಾಗ ಇದ್ದ ತೂಕ), ಭೀಮ 5380(4945), ಏಕಲವ್ಯ 5095(4730), ರೋಹಿತ 3930 (3625), ದೊಡ್ಡ ಹರವೆ ಲಕ್ಷ್ಮೀ 3570 (3485), ಕಂಜನ್ 4725(4515), ಪ್ರಶಾಂತ 5240 (4875), ಸುಗ್ರೀವ 5540 (5190), ಗೋಪಿ 5280(4970), ವರಲಕ್ಷ್ಮಿ 3555(3495), ಮಹೇಂದ್ರ 5150 (4910), ಹಿರಣ್ಯ 3160(2930), ಧನಂಜಯ 5255(5155) ಕೆ.ಜಿ. ತೂಕ ಹೊಂದಿವೆ.
ಜಂಜೂ ಸವಾರಿಯಲ್ಲಿ ನಿಶಾನೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಅರ್ಜುನ ಆನೆಯ ಸ್ಥಾನಕ್ಕೆ ಧನಂಜಯ ಆನೆಯನ್ನು ಆಯ್ಕೆ ಮಾಡಲಾಗಿದೆ. ದಸರಾದಲ್ಲಿ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ದಾಖಲೆ ನಿರ್ವಿುಸಿದ್ದ ಅರ್ಜುನನ ನಿವೃತ್ತಿ ಬಳಿಕ ನಿಶಾನೆಯಾಗಿ ಜಂಜೂಸವಾರಿಯಲ್ಲಿ ಭಾಗಿಯಾಗುತ್ತಿತ್ತು. ಕಾಡಾನೆಗಳ ಕಾರ್ಯಾಚರಣೆ ವೇಳೆ ಅರ್ಜುನ ಮರಣ ಹೊಂದಿದ್ದರಿಂದ ನಿಶಾನೆಯಾಗಿ ಧನಂಜಯ ಆಯ್ಕೆಯಾಗಿದ್ದಾನೆ. ಇನ್ನು ಅಭಿಮನ್ಯುಗೆ ಹಿರಣ್ಯ ಹಾಗೂ ಲಕ್ಷ್ಮೀ ಆನೆಗಳು ಕುಮ್ಕಿ ಆನೆಗಳಾಗಿ ಸಾಗಲಿವೆ ಎಂದು ಡಿಸಿಎಫ್ ಡಾ.ಪ್ರಭುಗೌಡ ಮಾಹಿತಿ ನೀಡಿದರು. ಇನ್ನು ನೌಫತ್ ಆನೆಯಾಗಿ ಗೋಪಿ ಆಯ್ಕೆಯಾಗಿದ್ದಾನೆ. ಜಂಬೂಸವಾರಿಯಲ್ಲಿ 9 ಆನೆಗಳು ಭಾಗಿಯಾಗಲಿವೆ. ಉಳಿದ ಆನೆಗಳು ಭಾಗಿಯಾಗುವುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದರು.