

ಸರಗೂರು: ಕಂದಾಯ ಇಲಾಖೆ ದಲಿತರಿಗೆ ಸಾಗುವಳಿ ಪತ್ರ ವಿಲೇವಾರಿ ಮಾಡುವಂತೆ ಒತ್ತಾಯಿಸಿ ದಸಂಸ (ಅಂಬೇಡ್ಕರ್ ವಾದ) ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಮಾತನಾಡಿ, ಭೂಮಿ ಪ್ರತಿಯೊಂದು ವಸ್ತುವಿನ ಉತ್ಪಾದನಾ ಸಾಧನವಾಗಿದೆ. ಭೂಮಿ ಉಳ್ಳವರಿಗೆ ಸಾಮಾಜಿಕ ಘನತೆಯನ್ನು ಹಾಗೂ ಆಳುವ ವರ್ಗವಾಗಿ ಸಮಾಜವನ್ನು ನಿಯಂತ್ರಿಸುವ ಅಧಿಕಾರವನ್ನು ನೀಡುತ್ತದೆ. ತಲೆತಲಾಂತರಗಳಿಂದ ರೈತರು ಹಾಗೂ ದಲಿತರನ್ನು ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ವೈದಿಕ ಧರ್ಮ ವಂಚಿಸುತ್ತಲೇ ಬಂದಿದೆ ಎಂದು ಆರೋಪಿಸಿದರು.
ಸರಗೂರು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ ಮಾತನಾಡಿ, ದೂರದೃಷ್ಟಿಯ ಫಲವಾಗಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದಿದ್ದರೂ ಜಾತಿವಾದಿಗಳು ಮತ್ತೆ ಅಧಿಕಾರಶಾಹಿಗಳ ಮಸಲತ್ತಿನಿಂದ ಹಾಗೂ ಸರ್ಕಾರಗಳ ಕುತಂತ್ರದಿಂದ ಪಿಟಿಸಿಎಲ್ ಜಮೀನುಗಳ ಪ್ರಕರಣಗಳಲ್ಲಿ ದಲಿತ ಸಮುದಾಯಗಳು ಕೋರ್ಟ್‌ಗಳಿಗೆ ಅಲೆಯುತ್ತಾ ವಂಚನೆಗೆ ಒಳಗಾಗಿದ್ದಾರೆ. ರೈತರನ್ನು ಕಂದಾಯ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಂದೀಶ್ವರಸ್ವಾಮಿ ಮಾತನಾಡಿ, ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯದ ಒಟ್ಟು ಭೂಮಿಯಲ್ಲಿ ಶೇ.11 ರಷ್ಟು ದಲಿತರು ಮಾತ್ರ ಭೂಮಿಯ ಹಕ್ಕುಳ್ಳವರಾಗಿದ್ದಾರೆ. ಸರ್ಕಾರ ದರಖಾಸ್ತು ಭೂಮಿ ಸಕ್ರಮೀಕರಣದ ಸಮಿತಿಗೆ ಆಯಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವ ಕೆಲವು ಸಮಿತಿಗಳು ತುಂಬ ನಿರ್ಲಕ್ಷತೆಯಿಂದ ಸರಿಯಾಗಿ ಸಭೆಗಳನ್ನು ಮಾಡದೆ ನಮೂನೆ 50, 53, 57 ರಲ್ಲಿ ಸಲ್ಲಿಸಿರುವ ದಲಿತ ಮತ್ತು ತಳ ಸಮುದಾಯಗಳ ಅರ್ಜಿಗಳು ಕೊಳೆಯುತ್ತಾ ಬಿದ್ದಿವೆ. ಸರ್ಕಾರ ಕೂಡಲೇ ಎಚ್ಚೆತ್ತು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಗ್ರೇಡ್-2 ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ಭೀಮ ಸೇನೆ ತಾಲೂಕು ಅಧ್ಯಕ್ಷ ಹೂವಿನಕೊಳ ಮಹೇಂದ್ರ ಮಾತನಾಡಿದರು. ದಸಂಸ (ಅಂಬೇಡ್ಕರ್ ವಾದ) ಸಂಘಟನಾ ಸಂಚಾಲಕ, ಮಹದೇವಸ್ವಾಮಿ ಕೂಲ್ಯ, ಮಣಿಕಂಠ ಮಟದಕಟ್ಟೆ, ನಾಗೇಂದ್ರ ಮೊಳೆಯೂರು ಕಾವಲ್, ಕೃಷ್ಣ ಕುರ್ಣಿಗಾಲ, ತಾಲೂಕು ಸಮಿತಿ ಸದಸ್ಯರಾದ ಶಿವರಾಜು ಚಂಗೌಡನಹಳ್ಳಿ, ಮಹದೇವ ಕಾಡಬೇಗೂರು, ಕೆ.ಮಂಜು ಬೆಳತ್ತೂರು, ಕೆಂಪರಾಜು, ಶಿವರುದ್ರ ಸರಗೂರು, ವೆಂಕಟರಾಮು ಶಿವಪುರ, ರೈತ ಸಂಘದ ಯುವ ಘಟಕದ ಅಧ್ಯಕ್ಷ ನವೀನ್, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.