ಕೆಎಸ್‌ಐಸಿ ಕಾರ್ಖಾನೆ ಮುಂದೆ ದಸಂಸ ಪ್ರತಿಭಟನೆ

16tnpnewsfile02
Published on

ತಿ.ನರಸೀಪುರ: ಪಟ್ಟಣದ ಕರ್ನಾಟಕ ರೇಷ್ಮೆ ಉದ್ಯಮಿಗಳ ನಿಗಮ (ಕೆಎಸ್‌ಐಸಿ) ಕಾರ್ಖಾನೆಯಲ್ಲಿ ಕೆಲಸದಿಂದ ತೆಗೆದಿರುವ ಹೊರ ಗುತ್ತಿಗೆ ಕಾರ್ಮಿಕರ ಮರು ನೇಮಕಕ್ಕೆ ಆಗ್ರಹಿಸಿ ಹಾಗೂ ಕಾರ್ಮಿಕರ ಶೋಷಣೆ, ದಲಿತ ವಿರೋಧಿ ಖಂಡಿಸಿ ಶನಿವಾರ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಮುಖಂಡರು, ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.


ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಉಮಾಮಹದೇವ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗೀಕರಣ, ಹೊರಗುತ್ತಿಗೆ ಹೆಸರಿನಲ್ಲಿ ಸಾರ್ವಜನಿಕ ಸಂಸ್ಥೆಗಳಲ್ಲಿ ಮೀಸಲಾತಿ ಅನುಸರಿಸದೆ ನೇಮಕಾತಿ ಮಾಡುವ ಮೂಲಕ ಮೀಸಲಾತಿ ವಂಚಿಸುತ್ತ ಬಂದಿವೆ. ಹೊರಗುತ್ತಿಗೆಯಲ್ಲಿ ಕಾರ್ಮಿಕರ ಶೋಷಣೆಗೆ ಒಳಪಡಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಸರ್ಕಾರ ಗಂಭೀರವಾಗಿ ಪರಿಗಣಿಸದ ಕಾರಣ ಇಂದು ಹೊರಗುತ್ತಿಗೆ ಕಾರ್ಮಿಕರು ಶೋಷಣೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಪಟ್ಟಣದ ಕೆಎಸ್‌ಐಸಿಯಲ್ಲಿ ಉಸ್ತುವಾರಿ ಪ್ರಧಾನ ವ್ಯವಸ್ಥಾಪಕ ತಮ್ಮ ವೈಯಕ್ತಿಕ ಪ್ರತಿಷ್ಠೆಯಿಂದ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಬೇಜವಾಬ್ದಾರಿಯಿಂದ ಕೆಎಸ್‌ಎಫ್ -9 ಎಂಬ ಖಾಸಗಿ ಏಜೆನ್ಸಿ ಮೂಲಕ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿದ್ದ ಬಡ ಕಾರ್ಮಿಕರನ್ನು ಕ್ಷುಲ್ಲಕ ಕಾರಣದಿಂದ ಕೆಲಸದಿಂದ ತೆಗೆದಿದ್ದು, ನೊಂದ ಕಾರ್ಮಿಕ ನಿಂಗರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಿಂದ ಹೊರ ತೆಗೆದಿರುವ ಕಾರ್ಮಿಕರನ್ನು ಮರು ನೇಮಕಾತಿ ಮಾಡಿಕೊಳ್ಳಬೇಕೆಂದು ನಿರ್ದೇಶನ ನೀಡಿದ್ದನ್ನೇ ನೆಪ ಮಾಡಿಕೊಂಡು ಹೊರಗಿನಿಂದ ಶಿಫಾರಸು ಮಾಡಿಸಿದ್ದಕ್ಕೆ ನಾನು ನಿನ್ನನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡು ನೊಂದ ಕಾರ್ಮಿಕರ ಮೇಲೆ ಮತ್ತಷ್ಟು ಶೋಷಣೆ ಮಾಡುತ್ತಿದ್ದಾರೆಂದು ಅವರು ಆರೋಪಿಸಿದರು.


ಖಾಸಗಿ ಏಜೆನ್ಸಿ ವಿರುದ್ಧ ಕ್ರಮ ಕೈಗೊಂಡು ನ್ಯಾಯ ನೀಡಬೇಕೆಂದು ನಮ್ಮ ಸಮಿತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮೂರು ತಿಂಗಳ ಹಿಂದೆಯೇ ಮನವಿ ಮಾಡಿದ್ದೇವೆ, ಅವರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಯಿತು ಎಂದರು.
ಪ್ರತಿಭಟನೆಯಲ್ಲಿ ಮುರುಡಗಳ್ಳಿ ಮಹದೇವ, ಆಲತ್ತೂರು ಶಿವರಾಜು, ಎಚ್ ಅಶೋಕ್, ವರಕೂಡು ಸಣ್ಣ ತಾಯಮ್ಮ, ಚೆಂದಳ್ಳಿ ಮಲ್ಲೇಶ್, ಕೇತುಪುರ ರವೀಂದ್ರ, ಆಲಗೂಡು ನಾಗರಾಜು, ಮರಡಿಪುರ ಮಲ್ಲಿಕಾರ್ಜುನ, ಲತಾ, ಸರೋಜಮ್ಮ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net