ಜಾನಪದ ವಿದ್ವಾಂಸ, ಸಾಹಿತಿ, ಸಂಶೋಧಕ ಹಾಗೂ ಶಿಕ್ಷಣ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಹಂಪನಹಳ್ಳಿ ತಿಮ್ಮೇಗೌಡ ಅವರ ದಾಸ ಒಕ್ಕಲಿಗ ಸಂಶೋಧನಾ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುವ ಹಿನ್ನೆಲೆ, ಜಿಲ್ಲಾ ಸಾಹಿತ್ಯ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕೊಟ್ರೇಶ್ ಉಪ್ಪಾರ್, ಚಲಂ, ರವಿ ನಾಕಲಗೂಡು, ಬಾ.ನಂ.ಲೋಕೇಶ್ ಇತರರಿದ್ದರು.
ಕೇಂದ್ರ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಉಪ್ಪಾರ್ ಬಣ್ಣನೆ
ಹಾಸನ:ಹಂಪನಹಳ್ಳಿ ತಿಮ್ಮೇಗೌಡ ಅವರ ದಾಸ ಒಕ್ಕಲಿಗ ಸಂಶೋಧನಾ ಕೃತಿ ಒಂದು ಜಾತಿಗೆ ಸೀಮಿತವಾಗದೆ, ಅದರ ಸಂಸ್ಕೃತಿ, ಪರಂಪರೆ ಹಾಗೂ ಜೀವನ ಶೈಲಿಯನ್ನು ಆಳವಾಗಿ ಪ್ರತಿಬಿಂಬಿಸುವ ಸಂಶೋಧನಾ ಕೃತಿ ಎಂದು ಕೇಂದ್ರ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಉಪ್ಪಾರ್ ಹೇಳಿದರು.
ಜಾನಪದ ವಿದ್ವಾಂಸ, ಸಾಹಿತಿ, ಸಂಶೋಧಕ ಹಾಗೂ ಶಿಕ್ಷಣ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಹಂಪನಹಳ್ಳಿ ತಿಮ್ಮೇಗೌಡ ಅವರ ದಾಸ ಒಕ್ಕಲಿಗ ಸಂಶೋಧನಾ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುವ ಹಿನ್ನೆಲೆ, ಜಿಲ್ಲಾ ಸಾಹಿತ್ಯ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯ ಸಾಹಿತ್ಯ ವಲಯಕ್ಕೆ ಮತ್ತೊಂದು ಕಿರೀಟ ತಂದುಕೊಟ್ಟ ಸಾಧನೆ ಇದಾಗಿದ್ದು, ಜಾನಪದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡಿದ ತಿಮ್ಮೇಗೌಡರಿಗೆ ಲಭಿಸಿದ ಈ ಪ್ರಶಸ್ತಿ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದೆ ಎಂದು ಹೇಳಿದರು.
ತಿಮ್ಮೇಗೌಡರು ಈ ಹಿಂದೆ ಜನಪದ ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದು, ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿರುವುದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಸಾಹಿತ್ಯ ಚಟುವಟಿಕೆಗಳಿಗೆ ಗೌರವ ತಂದಿದೆ ಎಂದರು.
ಸಾಹಿತಿ ಚಲಂ ಮಾತನಾಡಿ, ಹಂಪನಹಳ್ಳಿ ತಿಮ್ಮೇಗೌಡರು ಜಿಲ್ಲೆಯ ಸಾಹಿತ್ಯ ಬೇರುಗಳನ್ನು ಗಟ್ಟಿಗೊಳಿಸಿದ ಪ್ರಮುಖರಲ್ಲಿ ಒಬ್ಬರು. ಅವರು ಯುವ ಸಾಹಿತಿಗಳಿಗೆ ಪ್ರೇರಣೆಯಾಗಿದ್ದು, ಅವರ ಬಗ್ಗೆ ಇನ್ನಷ್ಟು ಅಧ್ಯಯನ ಮತ್ತು ಪ್ರಚಾರ ಅಗತ್ಯವಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿ ಪ್ರದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಾಗಿರುವುದು ಸಂತಸದ ಸಂಗತಿ ಎಂದರು.
ಯೋಗ ಶಿಕ್ಷಕ ಸುರೇಶ್ ಗುರೂಜಿ ಮಾತನಾಡಿ, ತಿಮ್ಮೇಗೌಡರ ವ್ಯಕ್ತಿತ್ವ ಜಿಲ್ಲೆಯ ಮಟ್ಟಿಗೆ ಮಾದರಿಯಾಗಿದ್ದು, ಅವರು ಮುಂದಿನ ದಿನಗಳಲ್ಲಿ ಸಾಹಿತ್ಯ ವಲಯಕ್ಕೆ ಮಾರ್ಗದರ್ಶಕರಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ಹಂಪನಹಳ್ಳಿ ತಿಮ್ಮೇಗೌಡರು ಜನಪದ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರಿಗೆ ಲಭಿಸಿದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇಡೀ ಜಿಲ್ಲೆಗೆ ಗೌರವ ತಂದಿದೆ ಎಂದರು. ಇಂತಹ ಸಾಧಕರನ್ನು ಗೌರವಿಸುವುದು ನಮ್ಮ ಕರ್ತವ್ಯವೆಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಾ.ನಂ.ಲೋಕೇಶ್ ಮಾತನಾಡಿ, ಶ್ರೇಷ್ಠ ಕೃತಿಗೆ ಪ್ರಶಸ್ತಿ ಲಭಿಸಿದ್ದು, ಇದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜನಪದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಪ್ರೇರಣೆಯಾಗಲಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಂಪ್ಪನಹಳ್ಳಿ ತಿಮ್ಮೇಗೌಡರು, ಗ್ರಾಮೀಣ ಕುಗ್ರಾಮದಿಂದ ಬಂದ ನಾನು ಯಾವುದೇ ವಿಶೇಷ ಪ್ರೋತ್ಸಾಹವಿಲ್ಲದೆ ಶಿಕ್ಷಣದತ್ತ ಮುಖ ಮಾಡಿ ಶಿಕ್ಷಕನಾದೆ. ನಂತರ ಅಧ್ಯಯನದ ಆಸಕ್ತಿಯಿಂದ ಸಾಹಿತ್ಯ ಕ್ಷೇತ್ರದತ್ತ ಒಲವು ಬೆಳೆಯಿತು ಎಂದು ತಮ್ಮ ಜೀವನ ಪಯಣವನ್ನು ಹಂಚಿಕೊಂಡರು.
ನನ್ನ ದಾಸ ಒಕ್ಕಲಿಗ ಕೃತಿ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಅದರ ಒಳಪಂಗಡದ ಸಂಸ್ಕೃತಿ ಮತ್ತು ಪರಂಪರೆಯ ಅಧ್ಯಯನದ ಪ್ರತೀಕವಾಗಿದೆ. ಈ ಕೃತಿಯನ್ನು ಆದಿಚುಂಚನಗಿರಿ ಮಠದ ವಿಶ್ವವಿದ್ಯಾಲಯದ ಪ್ರೇರಣೆಯಿಂದ ಕಡಿಮೆ ಅವಧಿಯಲ್ಲಿ ಸಿದ್ಧಪಡಿಸಿದ್ದೆ. ಇದೀಗ ಅದಕ್ಕೆ ರಾಷ್ಟ್ರಮಟ್ಟದ ಗೌರವ ದೊರೆತಿರುವುದು ಸಂತೋಷ ತಂದಿದೆ ಎಂದರು.
ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ, ಬಸವ ಕೇಂದ್ರದ ಅಧ್ಯಕ್ಷ ಬಸವರಾಜ, ಮಲ್ನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಪ್ರೊ. ಜಿ. ಮಂಜುನಾಥ್, ಬನವಾಸಿ ರುದ್ರಪ್ಪ, ಎವಿಕೆ ಕಾಲೇಜಿನ ನಿವೃತ್ತ ಉಪನ್ಯಾಸಕ ಚನ್ನರಾಯಪಟ್ಟಣ ಪ್ರಕಾಶ್, ಶಿಕ್ಷಕ ಸೋಮಶೇಖರ್ ಇತರರಿದ್ದರು.