ತಾರಕಕ್ಕೇರಿದ 'ತಗಡು' ವಿವಾದ: 'ನಟ ದರ್ಶನ್​ದು ಅತಿಯಾಯ್ತು! ಈಗಲೇ ಕ್ಷಮೆಯಾಚಿಸಿ, ಇಲ್ಲದಿದ್ದರೇ'….

Untitled design - 2024-02-22T163538.005
Published on

ಬೆಂಗಳೂರು: ಕಳೆದ ಒಂದೆರೆಡು ದಿನಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಡಿ 25 ಬೆಳ್ಳಿ ಪರ್ವ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್​, ವೇದಿಕೆಯ ಮೇಲೆ ತಮ್ಮ ಸಿನಿಪಯಣವನ್ನು ನೆನೆದು ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಈ ವೇಳೆ ನಿರ್ಮಾಪಕ ಉಮಾಪತಿ ವಿರುದ್ಧ ಕಿಡಿಕಾರಿದ ದರ್ಶನ್​, ಅಯ್ಯೋ ತಗಡೇ....ಗುಮ್ಮಿಸಿಕೊಳ್ಳಬೇಡ ಎಂದು ಬಳಸಿದ ಪದಗಳಿಗೆ ಇದೀಗ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದೆ.

ಉಮಾಪತಿ ವಿರುದ್ಧ ಗುಡುಗಿದ ದರ್ಶನ್​, ವೇದಿಕೆ ಮೇಲೆ ಬಳಸಿದ ಪದಗಳು ಅಕ್ಷಮ್ಯ ಎಂದು ಒಕ್ಕಲಿಗರ ಸಂಘ ಆರೋಪಿಸಿದೆ. ತಗಡು ಎಂದು ಹೇಳಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಒಕ್ಕಲಿಗ ನಾಯಕರು ಬೆಂಗಳೂರಿಗೆ ಬಂದು ಹೋರಾಟ ನಡೆಸಲು ಸಜ್ಜಾಗುತ್ತಿದ್ದಾರೆ. 10,000ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ ಬರಲು ಮುಖಂಡರ ಸಭೆ ನಡೆಸುತ್ತಿದ್ದು, ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ, ರಾಮನಗರ, ಕೋಲಾರ, ಮೈಸೂರು, ಕೋಲಾರ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಒಕ್ಕಲಿಗರ ಸಭೆ ಕರೆಯಲಾಗಿದೆ.

ನಟ ದರ್ಶನ್​ದು ಅತೀ ಆಯ್ತು. ಕೂಡಲೇ ಕ್ಷಮೆಯಾಚಿಸಲೇಬೇಕು. ತಗಡು, ಗುಮ್ಮುತ್ತೀವಿ ಎಂಬ ಪದಬಳಕೆ ಮಾಡಿರುವುದು ಸರಿಯಲ್ಲ. ಈಗಲೇ ಉಮಾಪತಿ ಬಳಿ ದರ್ಶನ್ ಕ್ಷಮೆ ಕೇಳಬೇಕು. ಇಲ್ಲದಿದ್ದರೇ ನಟನ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ ಒಕ್ಕಲಿಗರ ನಾಯಕರು.

ದರ್ಶನ್​ ಆಡಿದ ಮಾತುಗಳನ್ನು ವಾಪಾಸ್​ ಪಡೆಯಬೇಕು. ನಿರ್ಮಾಪಕ ಉಮಾಪತಿ ವಿರುದ್ಧ ಮಾತನಾಡಿದ ಪದಗಳನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಉಮಾಪತಿಗೆ ಜೀವ ಬೆದರಿಕೆಯೊಡ್ಡಿದ್ದಾರೆ. ಇಂತಹ ಪದಗಳನ್ನು ಬಳಸಿದ್ದಕ್ಕೆ ದರ್ಶನ್​ ವಿರುದ್ಧ ಎಫ್​ಐಆರ್​ ದಾಖಲಿಸಿ, ಬಂಧಿಸಬೇಕು ಎಂದು ಒಕ್ಕಲಿಗರ ಸಂಘದ ನಾಯಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net