

ಬೆಂಗಳೂರು: ಗೆಳತಿ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಮೆಸ್ಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಹತ್ಯೆ ಮಾಡಿ ಜೈಲು ಪಾಲಾಗಿರುವ ನಟ ದರ್ಶನ್ಗೆ ದಿನ ಕಳೆದಂತೆ ಹೊಸ ಹೊಸ ಸಂಕಷ್ಟಗಳು ಎದುರಾಗುತ್ತಿದೆ. ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ಅನ್ನು ಸಲ್ಲಸಿದ್ದು, ಪುಟ ತಿರುಗಿಸಿದಂತೆ ಡಿ ಗ್ಯಾಂಗ್ನ ಒಂದೊಂದೇ ಕರಾಳ ಕೃತ್ಯ ಬೆಳಕಿಗೆ ಬರುತ್ತಿದೆ.
ಸದ್ಯ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ನೋಡಿದರೆ ಡಿ ಗ್ಯಾಂಗ್ಗೆ ಜೈಲೂಟ ಖಾಯಂ ಎಂದು ಹೇಳಲಾಗಿದ್ದು, ಈ ವಿಚಾರ ತಿಳಿದು ನಿರ್ಮಾಪಕರು ಕಂಗಾಲಾಗಿದ್ದಾರೆ. ಏಕೆಂದರೆ ನಟ ದರ್ಶನ್ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಮುಂಗಡವನ್ನು ಪಡೆದಿದ್ದಾರೆ. ಈಗಾಗಲೇ ಡೆವಿಲ್ ಚಿತ್ರವನ್ನು ಅರ್ಧ ಮುಗಿಸಿಕೊಟ್ಟಿರುವ ನಟ ದರ್ಶನ್ ಬಾಕಿ ಚಿತ್ರೀಕರಣ ಉಳಿಸಿಕೊಂಡಿರುವ ಸಮಯದಲ್ಲೇ ಜೈಲು ಪಾಲಾಗಿದ್ದಾರೆ. ಒಂದು ವೇಳೆ ಅವರಿಗೆ ಸಜೆಯಾದರೆ ಮುಂದಿನ ನಡೆಯೇನು ಎಂಬುದರ ಕುರಿತು ಚಿತ್ರತಂಡ ಯೋಚಿಸುತ್ತಿದ್ದು, ದರ್ಶನ್ಗೆ ಶಿಕ್ಷೆಯಾದರೂ ಚಿತ್ರ ಮುಗಿಸಿಕೊಡಲು ದಾರಿ ಸಿಕ್ಕಿದೆ.
ಈ ಹಿಂದೆ TADA ಕೇಸ್ನಲ್ಲಿ ನಟ ಸಂಜಯ್ ದತ್ಗೆ ಶಿಕ್ಷೆಯಾದ ಸಂದರ್ಭದಲ್ಲಿ ಅವರಿಗೂ ಇದೇ ಸಂಕಷ್ಟ ಎದುರಾಗಿತ್ತು. ಆಗ ಸಂಜಯ್ ದತ್ ಕೂಡ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಕಾಲ್ಶೀಟ್ ಪ್ರಕಾರ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿಕೊಡಲು ಕೋರ್ಟ್ ಸಂಜಯ್ ದತ್ಗೆ 164 ದಿನಗಳ ಕಾಲ ಪೆರೋಲ್ ನೀಡಿತ್ತು. ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ನಟ ಸಂಜಯ್ ದತ್ ಒಪ್ಪಿಕೊಂಡಿರುವ ಸಿನಿಮಾಗಳ ಚಿತ್ರೀಕರಣವನ್ನು ಮುಗಿಸಿ ನಿರ್ಮಾಪಕರನ್ನು ಸಂಕಷ್ಟದಿಂದ ಪಾರು ಮಾಡಿದ್ದರು.
ಇದೀಗ ದರ್ಶನ್ಗೂ ಇದೇ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ನಟ ದರ್ಶನ್ ಡೆವಿಲ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಿದ್ದು, ಇದಾದ ಬಳಿಕ ತರುಣ್ ಸುಧೀರ್ ಹಾಗೂ ಜೋಗಿ ಪ್ರೇಮ್ ಅವರ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ರೇಣುಕಸ್ವಾಮಿ ಹತ್ಯೆ ಕೇಸ್ನಲ್ಲಿ ಮಟ ದರ್ಶನ್ಗೆ ಸಜೆಯಾದರೆ ನಿರ್ಮಾಪಕರು ನ್ಯಾಯಾಲಯಕ್ಕೆ ಪೆರೋಲ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ಪೆರೋಲ್ ಪಡೆದು ದರ್ಶನ್ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಬಹುದಾಗಿದೆ. ಇದಕ್ಕೆಲ್ಲಾ ನ್ಯಾಯಾಲಯ ಅನುವು ಮಾಡಿಕೊಡಬೇಕಾಗಿದೆ.