

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ ದರ್ಶನ್ ಮತ್ತು ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳು ಇದೀಗ ಬೆಂಗಳೂರು ಪೊಲೀಸರ ವಶದಲ್ಲಿದ್ದಾರೆ. ಇನ್ನು ಜೂ.20ರವರೆಗೂ ಹತ್ಯೆ ಕೇಸ್ನ ಆರೋಪಿಗಳು ಪೊಲೀಸರ ಕಸ್ಟಡಿಯಲ್ಲಿರಲಿ ಎಂದು ನ್ಯಾಯಾಲಯ ಆದೇಶಿಸಿತು. ಅದರಂತೆಯೇ ಇದೀಗ ದರ್ಶನ್ ಮತ್ತು ಇತರೆ ಆರೋಪಿಗಳು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇನ್ನು ಇಂದು ದರ್ಶನ್ ಸೇರಿದಂತೆ ಇತರೆ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಮಾಡುತ್ತಿರುವ ಪೊಲೀಸರು, ರೇಣುಕಸ್ವಾಮಿ ಹತ್ಯೆ ಘಟನೆ ನಡೆಯುವ ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ದರ್ಶನ್ ಮತ್ತು ಗ್ಯಾಂಗ್ ಪಾರ್ಟಿ ಮಾಡಿದ್ದನ್ನು ವಿಚಾರಣೆಯಿಂದ ತಿಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾರ್ ಜಾಗವನ್ನು ಮಹಜರು ಮಾಡಿದ್ದಾರೆ. ಮಹಜರಿಗೆ ನಟ ದರ್ಶನ್ನನ್ನು ಕೂಡ ಕರೆತಂದಿದ್ದಾರೆ.
ದರ್ಶನ್ ಮತ್ತು ಆತನ ಸಹಚರರನ್ನು ಸ್ಥಳಕ್ಕೆ ಕರೆತಂದ ಅನ್ನಪೂರ್ಣೆಶ್ವರಿ ನಗರ ಪೊಲೀಸರು, ಹತ್ಯೆಯಾದ ರೇಣುಕಸ್ವಾಮಿ ಮೊಬೈಲ್ ಪತ್ತೆಗಾಗಿ ಶೋಧ ನಡೆಸಿದ್ದಾರೆ. ಫೋನ್ ಸಿಗದ ಕಾರಣ ಅಲ್ಲಿಂದ ಪಬ್ನತ್ತ ಹಿಂತಿರುಗಿದ್ದಾರೆ.