

ಬೆಂಗಳೂರು: ಅಭಿಮಾನಿಗಳಿಂದ ‘ಡಿ ಬಾಸ್’ ಎಂದೇ ಕರೆಸಿಕೊಳ್ಳುವ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ರಾಬರ್ಟ್’ನ ಪ್ರಪ್ರಥಮ ಸಾಂಗ್ ‘ಬಾ ಬಾ ನಾ ರೆಡಿ ...’ ಅಭಿಮಾನಿಗಳ ನಿರೀಕ್ಷೆಯಂತೆ ಜಬರ್ದಸ್ತ್ ಆಗಿಯೇ ಮೂಡಿಬಂದಿದೆ.
ಮಾತ್ರವಲ್ಲ, ಮಂಗಳವಾರ ‘ಆನಂದ್ ಆಡಿಯೋ’ ಯೂಟ್ಯೂಬ್ ಲಿಂಕ್ನಲ್ಲಿ ಬಿಡುಗಡೆ ಆಗುತ್ತಿದ್ದಂತೆ ಭಾರಿ ಮೆಚ್ಚುಗೆ ಪಡೆಯಲಾರಂಭಿಸಿದೆ. ‘ಹಠವ ಹಿಡಿದು ಪಡೆಯೇ ಬರಲಿ ಹೊಸಕಿ ಬಿಡುವೆ ಕಾಲಡಿ, ಗುಡುಗು ಸಿಡಿಲು ಜೊತೆಗೇ ಬರಲಿ ಕೆಡವಿ ಹೊಡೆವ ಗಾರುಡಿ ...’ ಎಂಬ ಸಾಲಿನಿಂದ ಆರಂಭವಾಗುವ ಈ ಹಾಡಿನುದ್ದಕ್ಕೂ ಅಂತ್ಯಪ್ರಾಸವಾಗಿ ‘ಡಿ’ ಇರುವುದು ಹಾಡಿಗೆ ಒಂದು ವಿಶೇಷತೆಯನ್ನು ತಂದುಕೊಟ್ಟಿದ್ದು, ಅದೇ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದೆ.
ಚಿತ್ರದಲ್ಲಿನ ನಾಯಕ ಪಾತ್ರ, ದರ್ಶನ್ ಇಮೇಜ್ ಎರಡನ್ನೂ ರಂಜಿಸುವ ರೀತಿಯಲ್ಲಿ ಈ ಹಾಡು ಜೋಶ್ಭರಿತ ಮ್ಯೂಸಿಕ್ನೊಂದಿಗೆ ಮೂಡಿಬಂದಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದ ಈ ಗೀತೆಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
‘ಉಮಾಪತಿ ಫಿಲಮ್ಸ್’ ಬ್ಯಾನರ್ನಲ್ಲಿ ಉಮಾಪತಿ ಶ್ರೀನಿವಾಸ ಗೌಡ ನಿರ್ವಣ, ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಈ ಸಿನಿಮಾದಲ್ಲಿ ದರ್ಶನ್, ಆಶಾ ಭಟ್, ಸೋನಲ್ ಮೊಂತೆರೊ, ಜಗಪತಿ ಬಾಬು, ವಿನೋದ್ ಪ್ರಭಾಕರ್, ರವಿಕಿಶನ್, ಪಿ.ರವಿಶಂಕರ್, ದೇವರಾಜ್ ಮುಂತಾದ ಅದ್ದೂರಿ ತಾರಾಗಣವೇ ಇದೆ. ಸದ್ಯದ ಮಾಹಿತಿ ಪ್ರಕಾರ ಏ. 9ರಂದು ಸಿನಿಮಾ ಬಿಡುಗಡೆ ಮಾಡುವ ಗುರಿ ಇರಿಸಿಕೊಂಡಿದೆಯಂತೆ ಚಿತ್ರತಂಡ.