

ಪಕ್ಷ ಮತ್ತು ಸರ್ಕಾರದ ಮೇಲೆ ಪ್ರಬಲ ಹಿಡಿತ ಸಾಧಿಸಿದ್ದ ಇಂದಿರಾ ಗಾಂಧಿಯವರ ಆಡಳಿತ ವೈಖರಿ ಕುರಿತು ಮಿಶ್ರ ಅಭಿಪ್ರಾಯಗಳಿವೆ. ಕೆಲ ವಿಷಯಗಳಲ್ಲಿ ಅವರಿಗೆ ಶ್ಲಾಘನೆ ವ್ಯಕ್ತವಾದರೆ, ಇನ್ನು ಕೆಲವದರಲ್ಲಿ ಟೀಕೆಗಳ ಸುರಿಮಳೆ. ಆದರೆ ‘ಆಂತರಿಕ ಭದ್ರತೆಗೆ ಭೀತಿ’ ಹೆಸರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು ಮಾತ್ರ ಅಕ್ಷಮ್ಯ ಎಂದೇ ಪರಿಗಣಿತವಾಗಿದೆ. ಈ ಘಟನೆ ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಪಲ್ಲಟಕ್ಕೆ ಕಾರಣವಾಯಿತು ಎಂಬುದು ದಿಟವಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯ ಕರಾಳ ಅಧ್ಯಾಯ ಎಂಬುದರಲ್ಲಿ ಅನುಮಾನವಿಲ್ಲ. ತುರ್ತು ಪರಿಸ್ಥಿತಿ ಹೇರಿ ಇಂದಿಗೆ ಐವತ್ತು ವರ್ಷ. ಅದರ ಹಿನ್ನೆಲೆ, ಪರಿಣಾಮ ಮತ್ತಿತರ ಸಂಗತಿಗಳ ವಿವರ ಇಲ್ಲಿದೆ.
ಚುನಾವಣಾ ಅಕ್ರಮದ ಕುರಿತ ಕೋರ್ಟ್ ತೀರ್ಪ, ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಲು ಕಾರಣ ಎಂಬುದು ಸಾಮಾನ್ಯ ಗ್ರಹಿಕೆ. ಆದರೆ ಅದಕ್ಕೂ ಎರಡು ವರ್ಷ ಹಿಂದಿನಿಂದಲೇ ಇಂದಿರಾಗೆ ಕೇಡುಗಾಲ ಆರಂಭವಾಗಿತ್ತು. 1971ರ ಸಾರ್ವತ್ರಿಕ ಚುನಾವಣೆಯಲ್ಲಿ ‘ಗರೀಬಿ ಹಟಾವೋ’ ಘೊಷವಾಕ್ಯದ ಮೂಲಕ ಜನಮನಗೆದ್ದು ಸ್ಪಷ್ಟ ಬಹುಮತ (518ರಲ್ಲಿ 352 ಸ್ಥಾನ) ದಿಂದ ಅಧಿಕಾರಕ್ಕೆ ಬಂದಿದ್ದರು. ಅದೇ ವರ್ಷ, ಬಾಂಗ್ಲಾ ವಿಮೋಚನಾ ಸಮರದಲ್ಲಿ ಪಾಕ್ ಸೇನೆಯನ್ನು ಬಗ್ಗುಬಡಿದು ಬಾಂಗ್ಲಾದೇಶ ಉದಯಕ್ಕೆ ಕಾರಣರಾಗಿದ್ದರು. ಈ ರೀತಿ ಉತ್ತುಂಗದಲ್ಲಿರುವಾಗಲೇ ಇಂದಿರಾ ಜಾತಕದಲ್ಲಿ ರಾಹು ಪ್ರವೇಶವಾಗಿತ್ತು.
ಚುನಾವಣಾ ಅಕ್ರಮ: ರಾಯ್ಬರೇಲಿಯಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಇಂದಿರಾ ವಿರುದ್ಧ ಸ್ಪರ್ಧಿಸಿ ಸೋತಿದ್ದ ರಾಜ್ ನಾರಾಯಣ್, ಚುನಾವಣಾ ಅಕ್ರಮ ಸಂಬಂಧ ಅಲಹಾಬಾದ್ ಹೈಕೋರ್ಟ್ನಲ್ಲಿ ದಾವೆ ಹೂಡಿದರು. ಇಂದಿರಾ ಗಾಂಧಿಯನ್ನು ಕಟಕಟೆಗೆ ಕರೆಸಿ ವಿಚಾರಣೆ ಮಾಡಲಾಯಿತು. ಇದು ಪ್ರಧಾನಿಯೊಬ್ಬರು ಕಟಕಟೆಯಲ್ಲಿ ವಿಚಾರಣೆ ಎದುರಿಸಿದ ಪ್ರಥಮ ದೃಷ್ಟಾಂತವಾಗಿತ್ತು. ಮತದಾರರಿಗೆ ಹಣ ಹಂಚಿಕೆ ಸೇರಿ 14 ಪ್ರಕರಣಗಳನ್ನು ಇಂದಿರಾ ಎದುರಿಸುತ್ತಿದ್ದರಾದರೂ ಸರ್ಕಾರಿ ಅಧಿಕಾರಿಗಳು, ಪೊಲೀಸರನ್ನು ಚುನಾವಣಾ ಪ್ರಚಾರ ಕಾರ್ಯದಲ್ಲಿ ಬಳಸಿಕೊಂಡ ಸಂಬಂಧ 2 ಪ್ರಕರಣಗಳಲ್ಲಿ ಇಂದಿರಾ ದೋಷಿಯೆಂದು 1975ರ ಜೂನ್ 12ರಂದು ನ್ಯಾಯಮೂರ್ತಿ ಜಗಮೋಹನ್ಲಾಲ್ ಸಿನ್ಹಾ ತೀರ್ಪು ನೀಡಿ, ಅವರ ಸಂಸದತ್ವವನ್ನು ಅನರ್ಹಗೊಳಿಸಿದರು. ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವರಿಗೆ 20 ದಿನಗಳ ಕಾಲಾವಕಾಶ ನೀಡಲಾಯಿತು.
ಇನ್ನೊಂದೆಡೆ ಪುತ್ರ ಸಂಜಯ್ ಗಾಂಧಿಯ ಹುಚ್ಚು ಸಾಹಸಗಳು ಇಂದಿರಾರನ್ನು ಇನ್ನಿಲ್ಲದಂತೆ ಕಾಡಲಾರಂಭಿಸಿದ್ದವು. ಕಾರು ಉತ್ಪಾದನಾ ಯೋಜನೆಗೆ ಪ್ರಭಾವ ಬಳಸಿ ಬ್ಯಾಂಕ್ಗಳಿಂದ ಸಾಲ ಹಾಗೂ ಹರಿಯಾಣದ ಫಲವತ್ತಾದ ಕೃಷಿ ಭೂಮಿಯನ್ನು ಸಂಜಯ್ ಪಡೆದುಕೊಂಡಿದ್ದು ಭಾರಿ ಟೀಕೆಗೆ ಒಳಗಾಯಿತು. ಅಲ್ಲದೆ, 1974ರಲ್ಲಿ ಗುಜರಾತ್ ಕಾಲೇಜೊಂದರಲ್ಲಿ ಮೆಸ್ ಬಿಲ್ ಹೆಚ್ಚಳ ವಿರೋಧಿಸಿ ಪ್ರತಿಭಟನೆ ಆರಂಭಿಸಿದ ವಿದ್ಯಾರ್ಥಿಗಳು, ಬಳಿಕ ಅದನ್ನು ‘ಭಾರತ ನವ ನಿರ್ವಣ’ ಹೋರಾಟವನ್ನಾಗಿ ಪರಿವರ್ತಿಸಿದರು. ಇದೇ ವೇಳೆ ಆಡಳಿತ ದುರುಪಯೋಗ ಹಾಗೂ ಭ್ರಷ್ಟಾಚಾರ ವಿರೋಧಿಸಿ ಗಾಂಧಿವಾದಿ ಜಯಪ್ರಕಾಶ್ ನಾರಾಯಣ್ ಬಿಹಾರದಲ್ಲಿ ವಿದ್ಯಾರ್ಥಿ ಸಂಘಟನೆಗಳ ಸಹಕಾರದೊಂದಿಗೆ ಹೋರಾಟ ಆರಂಭಿಸಿದರು.
ಚುನಾವಣಾ ಅಕ್ರಮ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಇಂದಿರಾ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್, ಜೂನ್ 24ರಂದು ಹೈಕೋರ್ಟ್ ತೀರ್ಪಿಗೆ ಷರತ್ತುಬದ್ಧ ತಡೆ ನೀಡಿದರು. ಪ್ರಧಾನಿಯಾಗಿ ಇಂದಿರಾ ಮುಂದುವರಿಯಬಹುದು. ಆದರೆ, ಲೋಕಸಭೆಯಲ್ಲಿ ಮತ ಚಲಾಯಿಸುವ ಅಧಿಕಾರವಿರುವುದಿಲ್ಲ ಎಂಬ ಈ ತೀರ್ಪನ್ನೇ ಅಸ್ತ್ರವಾಗಿಸಿಕೊಂಡು ಇಂದಿರಾ ಗಾಂಧಿ ಪದತ್ಯಾಗಕ್ಕೆ ಒತ್ತಾಯಿಸಿ ದೇಶಾದ್ಯಂತ ಹೋರಾಟ ತೀವ್ರಗೊಳಿಸಲು ಜೆಪಿ ಮತ್ತಿತರ ವಿರೋಧಿ ಮುಖಂಡರು ಕಾರ್ಯಪ್ರವೃತ್ತರಾದರು. ಇದರಿಂದ ತೀವ್ರ ಮುಜುಗರಕ್ಕೊಳಗಾದ ಇಂದಿರಾ, ಸಂಪುಟದ ಒಪ್ಪಿಗೆಯನ್ನೂ ಪಡೆಯದೆ ಜೂನ್ 25ರ ಮಧ್ಯರಾತ್ರಿ 12 ಗಂಟೆಗೆ ಕೆಲವೇ ನಿಮಿಷಗಳಿರುವಾಗ ರಾಷ್ಟ್ರಪತಿಯ ಮೂಲಕ ತುರ್ತಪರಿಸ್ಥಿತಿಯನ್ನು ಘೋಷಿಸಿಬಿಟ್ಟರು.
ಬೆಂಗಳೂರಿನ ಈಗಿನ ಸ್ವಾತಂತ್ರ್ಯ ಉದ್ಯಾನ ಆಗ ಕೇಂದ್ರ ಕಾರಾಗೃಹವಾಗಿತ್ತು. ತುರ್ತು ಪರಿಸ್ಥಿತಿ ಘೊಷಣೆಯಾಗಿ ತೆರವುಗೊಳ್ಳುವವರೆಗೆ ಹಲವು ನಾಯಕರು ಬಂಧನಕ್ಕೊಳಗಾಗಿ ಕಠಿಣ ಶಿಕ್ಷೆ ಅನುಭವಿಸಿದ್ದು ಇದೇ ಜೈಲಿನಲ್ಲಿ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದ ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ವಿ.ಎಸ್.ಆಚಾರ್ಯ, ಎಸ್.ಮಲ್ಲಿಕಾರ್ಜುನಯ್ಯ ಅವರಂಥ ಅನೇಕ ನಾಯಕರನ್ನು ಇಲ್ಲೇ ಕೂಡಿ ಹಾಕಲಾಗಿತ್ತು. ಬಂಧಿತರನ್ನು ಸೆಲ್ಗಳಿಂದ ಹೊರಬರಲು ಬಿಡುತ್ತಿರಲಿಲ್ಲ. ಹೊಟ್ಟೆ ತುಂಬ ಊಟವನ್ನೂ ನೀಡದೆ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು.
ತುರ್ತು ಪರಿಸ್ಥಿತಿ ಹೇರಿ ಸಂವಿಧಾನದ 19ನೇ ವಿಧಿಯನ್ನು ಅಮಾನತಿನಲ್ಲಿಡುವ ಮೂಲಕ ಸಂವಿಧಾನಬದ್ಧವಾಗಿ ಪ್ರಜೆಗಳು ಹೊಂದಿರುವ ಹಕ್ಕುಗಳನ್ನು ಮೊಟಕು ಗೊಳಿಸುವ ಅಧಿಕಾರ ಇಂದಿರಾಗೆ ದೊರೆಯಿತು. ರಾಜ್ಯಗಳಿಗೆ ಹೀಗೆಯೇ ಕಾರ್ಯ ನಿರ್ವಹಿಸಬೇಕೆಂಬ ಸೂಚನೆಯನ್ನು ಕೇಂದ್ರ ನೀಡಬಹುದಾ ಗಿತ್ತು. ತಮ್ಮ ಹಕ್ಕನ್ನು ಒದಗಿಸು ವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸದಂತೆ ನ್ಯಾಯಾಲಯಗಳಿಗೆ ತಿಳಿಸಬಹುದಾಗಿತ್ತು.