ರೈತ ಸಂಘದಿಂದ ಕರಾಳ ದಿನ: ಪ್ರತಿಭಟನೆ

protest
ರೈತ ಕರಾಳ ದಿನದ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಎಚ್.ಆರ್.ಬಸವರಾಜಪ್ಪ ಮಾತನಾಡಿದರು. ಟಿ.ಎಂ.ಚಂದ್ರಪ್ಪ, ಜಿ.ಎನ್.ಪಂಚಾಕ್ಷರಿ, ಇ.ಬಿ.ಜಗದೀಶ್, ಸಿ.ಚಂದ್ರಪ್ಪ., ಕೆ.ರಾಘವೇಂದ್ರ, ಹನುಮಂತಪ್ಪ, ಟಿ.ಎಂ.ಚಂದ್ರಪ್ಪ ಮುಂತಾದವರಿದ್ದರು.
Published on

ಶಿವಮೊಗ್ಗ: ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಕರಾಳ ದಿನಾಚರಣೆ ಅಂಗವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ರೈತರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವರ್ಷದಿಂದ ವರ್ಷಕ್ಕೆ ರೈತರ ಸಮಸ್ಯೆಗಳು ಹೆಚ್ಚುತ್ತಿವೆ. ಸರ್ಕಾರದ ಭರವಸೆಗಳು ಜಾರಿಯಾಗುತ್ತಿಲ್ಲ. ಇದುವರೆಗೆ ಡಾ.ಸ್ವಾಮಿನಾಥನ್ ವರದಿ ಅನುಷ್ಟಾನಕ್ಕೆ ಯಾವ ಸರ್ಕಾರಗಳೂ ಆಸಕ್ತಿ ತೋರಿಲ್ಲ. ಸರ್ಕಾರ ರೂಪಿಸುವ ಬೆಂಬಲ ಬೆಲೆಗೆ ಯಾವುದೇ ಮಾನದಂಡ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರೈತರಿಗೆ ಸ್ಪಂದಿಸುತ್ತಿಲ್ಲ. 10 ವರ್ಷಗಳ ಹಿಂದೆಯೇ ಬಿಜೆಪಿ ರೈತರ ಸಾಲ ಮನ್ನಾ ಹಾಗೂ ಡಾ.ಸ್ವಾಮಿನಾಥನ್ ವರದಿ ಜಾರಿಯ ಭರವಸೆ ನೀಡಿತ್ತು. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕೃಷಿಯ ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಯಾವ ಸರ್ಕಾರಗಳೂ ರೈತರ ನೆರವಿಗೆ ಮುಂದಾಗಿಲ್ಲ ಎಂದು ದೂರಿದುರ.
ವರ್ಷದಿಂದ ವರ್ಷಕ್ಕೆ ರೈತರ ಸಾಲ ಹೆಚ್ಚುತ್ತಿದೆ. ವಿದ್ಯುತ್ ಪೂರೈಕೆ ಖಾಸಗೀಕರಣದ ಆತಂಕ ರೈತ ಸಮೂಹವನ್ನು ಕಾಡುತ್ತಿದೆ. ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಯತ್ನವನ್ನು ಸರ್ಕಾರ ಕೈ ಬಿಡಬೇಕು. ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಚೌಕಟ್ಟು ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಿಂದಾಲ್ ಕಂಪನಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಭೂಮಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು. ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವ ನಿರ್ಧಾರ ಬಿಡಬೇಕು. ಅತಿವೃಷ್ಟಿಯಿಂದ ರೈತರು ವ್ಯಾಪಕ ನಷ್ಟ ಅನುಭವಿಸಿದ್ದು ಕೂಡಲೇ ಎಲ್ಲರಿಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು. ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ರೈತರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಬ್ಯಾಂಕ್‌ಗಳು ಬಲವಂತದ ಸಾಲ ವಸೂಲಾತಿ ನಿಲ್ಲಿಸಬೇಕು. ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.
ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಎನ್. ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಪ್ರಮುಖರಾದ ಜ್ಞಾನೇಶ್, ಸಿ.ಚಂದ್ರಪ್ಪ, ಕಸಟ್ಟಿ ರುದ್ರೇಶ್, ಇ.ಬಿ.ಜಗದೀಶ್ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net