

ನ್ಯೂಯಾರ್ಕ್: ಇತ್ತೀಚಿನ ದಿನಗಳಲ್ಲಿ ವೆಡ್ಡಿಂಗ್ ಫೋಟೋಶೂಟ್ ಎಂಬುದು ಟ್ರೆಂಡ್ ಆಗಿಬಿಟ್ಟಿದೆ. ಅದರಲ್ಲೂ ಹೊಸತನ ಹುಡುಕುವ ವಧು-ವರರು ಕೆಲವೊಮ್ಮೆ ದುಸ್ಸಾಹಸಕ್ಕೂ ಕೈಹಾಕುತ್ತಾರೆಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ವಧುವೊಬ್ಬಳು 1,900 ಅಡಿ ಎತ್ತರದ ತುತ್ತ ತುದಿಯಲ್ಲಿ ತೂಗಾಡಿದ ರೀತಿಯಲ್ಲಿ ಫೋಟೋಶೂಟ್ ಮಾಡಿಕೊಂಡಿರುವುದು ಇದೀಗ ವೈರಲ್ ಆಗಿದೆ.
ರಯಾನ್ ಮೈರ್ಸ್ (30) ಮತ್ತು ಪತ್ನಿ ಸ್ಕೈ (28) ಅಮೆರಿಕದ ಅರ್ಕಾನ್ಸಾಸ್ ಮೂಲದವರು. ಬಹಳ ಅದ್ಧೂರಿಯಾಗಿ ಮದುವೆ ಆಗಬೇಕೆಂದು ಕನಸು ಕಟ್ಟಿಕೊಂಡಿದ್ದ ಅವರಿಗೆ ಕರೊನಾ ವೈರಲ್ ಲಾಕ್ಡೌನ್ ಮಾರ್ಗಸೂಚಿ ತಣ್ಣೀರೆರಚಿತು. ಆದರೂ ಸರಳವಾಗಿ ಮದುವೆಯಾದ ನವಜೋಡಿ ಸಾಹಸಮಯ ಫೋಟೋಶೂಟ್ ಮಾಡಿಕೊಳ್ಳಲು ನಿರ್ಧರಿಸಿತು. ಅದಕ್ಕಾಗಿ ಅವರು ಆರಿಸಿಕೊಂಡ ಜಾಗ ಅರ್ಕಾನ್ಸಾಸ್ನಲ್ಲಿರುವ ಪ್ರಖ್ಯಾತ ಟ್ರೆಕ್ಕಿಂಗ್ ಪ್ರದೇಶವಾದ ಹವ್ಕ್ಸ್ಬಿಲ್ ಕ್ರ್ಯಾಗ್. ಇದು ತುಂಬಾ ಅಪಾಯಕಾರಿ ಜಾಗವೂ ಹೌದು. ಆಳವಾದ ಪ್ರಪಾತವಾಗಿದ್ದು, ನವಜೋಡಿ 1,900 ಅಡಿ ಎತ್ತರದಲ್ಲಿ ಫೋಟೋಶೂಟ್ ಮಾಡಿಕೊಂಡಿದ್ದಾರೆ.
ಫೋಟೋಗ್ರಾಫರ್ ಮಾಸನ್ ಗಾರ್ಡನರ್ ಎಂಬುವರು ರೋಮಾಂಚನಕಾರಿ ಫೋಟೋಗಳನ್ನು ಸೆರೆಹಿಡಿದಿದ್ದಾರೆ. ಅದರಲ್ಲೂ ಒಂದು ಫೋಟೋ ಭಾರಿ ವೈರಲ್ ಆಗಿದೆ. ಪರ್ವತದ ತುತ್ತ ತುದಿಯಲ್ಲಿ ವಧುವಿನ ಕೈಯನ್ನು ವರ ಹಿಡಿದಿದ್ದಾನೆ. ವಧು ತೂಗಾಡುವಂತಿದ್ದು, ವರನ ಕೈನಿಂದ ಜಾರಿದ ವಧು ಪ್ರಪಾತದ ಕೆಳಗೆ ಬೀಳುವಂತಿದೆ. ಫೋಟೋ ನೋಡಿದವರು ಬಿದ್ದೇ ಹೋದಳೇನು ಎಂಬಂತಿದೆ. ಆದರೆ, ರೋಚಕ ಟ್ವಿಸ್ಟ್ ಏನೆಂದರೆ ವಧುವಿನ ರಕ್ಷಣೆಗೆ ರೋಪ್ ಬಳಸಿರುವು ಮತ್ತೊಂದು ಫೋಟೋದಲ್ಲಿ ಕಾಣುತ್ತದೆ.
ಹೀಗೆ ನವಜೋಡಿಯ ಸಾಕಷ್ಟು ಸಾಹಸಮಯ ಫೋಟೋಗಳನ್ನು ಫೋಟೋಗ್ರಾಫರ್ ಸೆರೆಹಿಡಿದಿದ್ದಾರೆ. ನವಜೋಡಿ ಸಾಹಸಪ್ರಿಯರಾದ್ದರಿಂದ ಈ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಆದರೆ, ದುರ್ಬಲ ಹೃದಯದವರು ಈ ರೀತಿಯ ದುಸ್ಸಾಹಸಕ್ಕೆ ಕೈಹಾಕಬಾರದು ಎಂಬುದು ನವಜೋಡಿಯ ಮನವಿಯೂ ಆಗಿದೆ. ಸದ್ಯ ಫೋಟೋಗಳಂತೂ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. (ಏಜೆನ್ಸೀಸ್)