ಧನ್ವಂತರಿ: ವೈರಾಣು ಪ್ರತಿಬಂಧಿಸಿ

Published on

ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ನಾಡಿನೆಲ್ಲೆಡೆ ಕೋಲಾಹಲ ಎಬ್ಬಿಸುವ ರೋಗಗಳು ಇಂದು ನಿನ್ನೆಯದಲ್ಲ. ಆಯುರ್ವೆದದ ಮೂಲಗ್ರಂಥಗಳಲ್ಲೇ ಸಾಂಕ್ರಾಮಿಕ ರೋಗಗಳು ಜನಪದವನ್ನೇ ಧ್ವಂಸಗೊಳಿಸುವ ಪರಿಯನ್ನು ಮಾರ್ವಿುಕವಾಗಿ ವಿವರಿಸಿದ್ದು ಇಂದಿಗೂ ಅದೆಷ್ಟು ಪ್ರಸ್ತುತ ಎಂಬುದನ್ನು ಅರಿತರೆ ಅಚ್ಚರಿಯಾಗುತ್ತದೆ. ಲೈಂಗಿಕ ಸಂಪರ್ಕ, ಮೈ ಮುಟ್ಟುವುದು, ಉಸಿರಿನ ಮೂಲಕ, ಒಟ್ಟಾಗಿ ಆಹಾರ ಸೇವಿಸುವುದು, ಜೊತೆಯಲ್ಲಿ ಮಲಗುವುದು, ಅಕ್ಕಪಕ್ಕದಲ್ಲೇ ಕುಳಿತುಕೊಳ್ಳುವುದು, ಬೇರೆಯವರ ಬಟ್ಟೆಗಳನ್ನು ಉಡುವುದು, ಹಾರ, ಆಭರಣಗಳನ್ನು ಹಂಚಿಕೊಳ್ಳುವುದು, ಒಂದೇ ಸುಗಂಧದ್ರವ್ಯವನ್ನು ಹಲವರು ಬಳಸುವುದು - ಇವುಗಳಿಂದ ಚರ್ಮರೋಗ, ಜ್ವರ, ಕ್ಷಯರೋಗ, ಕೆಂಗಣ್ಣು ಮೊದಲಾದ ರೋಗಗಳು ಒಬ್ಬರಿಂದೊಬ್ಬರಿಗೆ ನರರಲ್ಲಿ ಹರಡುತ್ತದೆ ಎಂದಿವೆ. ಇಂದು ವಿಶ್ವದಲ್ಲಿ ಭಾದಿಸುತ್ತಿರುವ ಕರೊನಾ ವೈರಸ್​ನಿಂದ ನೂತನ ಕೋವಿಡ್ 19ನ್ನು ಪರಸ್ಪರ ಹರಡದಂತೆ ತಡೆಯಲು ತೆಗೆದುಕೊಳ್ಳಬೇಕಾಗಿರುವ ಕ್ರಮಗಳೂ ಇದರಲ್ಲೇ ಅಡಗಿದೆ.

ಭಾರತದಲ್ಲಿ ಕರೊನಾ ವೈರಾಣು ಹುಟ್ಟಿದ್ದಲ್ಲ. ಬೀಸುವ ಗಾಳಿಯಲ್ಲಿ ವಾತಾವರಣದ ಮೂಲಕ ನೆರೆಯ ಚೀನಾದಿಂದ ಇಲ್ಲಿಗೆ ಬರುವುದಿಲ್ಲ. ಸೊಳ್ಳೆಗಳ ಮೂಲಕವೂ ಹರಡುವುದಿಲ್ಲ. ಪ್ರಾಣಿಗಳಿಂದ ಇಲ್ಲಿಗೆ ವರ್ಗಾವಣೆಯಾಗುತ್ತಿಲ್ಲ. ಹಾಗಂದಮೇಲೆ ಇಲ್ಲಿ ಕರೊನಾ ಎಲ್ಲೆಡೆ ಪಸರಿಸುವುದನ್ನು ತಡೆಗಟ್ಟಬೇಕಾದರೆ ಒಂದಂಶ ಮುಖ್ಯವಾಗುತ್ತದೆ. ಹೆಚ್ಚುಕಡಿಮೆ ಎಲ್ಲರೂ ವಿದೇಶದಲ್ಲಿ ಸೋಂಕಿತರಾಗಿ ನಮ್ಮ ದೇಶಕ್ಕೆ ಬಂದವರೇ. ಅವರ ನೇರ ಸಂಪರ್ಕದಿಂದ ಸೋಂಕು ಹರಡಿದವರು ಬೆರಳೆಣಿಕೆಯಲ್ಲಿದ್ದು ಅವರೆಲ್ಲ ರೋಗಿಗಳ ಮನೆಯಲ್ಲಿರುವವರೇ ಆಗಿದ್ದಾರೆ! ಇದನ್ನು ಗಮನದಲ್ಲಿಟ್ಟು ವಿಮಾನ ನಿಲ್ದಾಣಗಳಲ್ಲಿ ವೈದ್ಯರನ್ನು ಅಗತ್ಯಕ್ಕನುಗುಣವಾಗಿ ನೇಮಿಸಿಕೊಂಡು ವಿದೇಶದಿಂದ ಬರುವ ಪ್ರಯಾಣಿಕರಿಗೆ 20 ದಿನಗಳ ಕಾಲ ‘ಮನೆಬಿಟ್ಟು ಹೊರಡದಿರಿ, ಮನೆಯವರನ್ನು ಮುಟ್ಟದಿರಿ’ ಎಂಬ ಜಾಗೃತಿ ಮೂಡಿಸುವುದು ಅತ್ಯುತ್ತಮ ವೈರಾಣು ಪ್ರತಿಬಂಧಕ ಉಪಾಯವಾಗುತ್ತದೆ.

ಜನರಿಗೆ ಶೀತ, ಜ್ವರಗಳು ಬರುತ್ತಲೇ ಇರುತ್ತದೆ. ಇದರಿಂದ ಸಂದೇಹ ಉದ್ಭವಿಸದಂತೆ ಮಾಡಲು ಶ್ವಾಸಕೋಶದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅನಿವಾರ್ಯ. ಕುದಿಯುವ ನೀರಿಗೆ ತುಳಸಿಎಲೆ ಅಥವಾ ಲಾವಂಚದ ಬೇರನ್ನು ಹಾಕಿಟ್ಟು ಅದನ್ನೇ ದಿನಪೂರ್ತಿ ಕುಡಿಯಲು ಬಳಸುವುದು ಈ ಕಾಲಘಟ್ಟದಲ್ಲಿ ಶ್ರೇಯಸ್ಕರ. ಮಜ್ಜಿಗೆಗೆ ಪುದಿನ ಅಥವಾ ಶುಂಠಿಯನ್ನು ಸೇರಿಸುವುದರಿಂದ ಸುಲಭವಾಗಿ ಶೀತವಾಗುವುದಿಲ್ಲ. ಒಂದುಲೋಟ ಹಾಲಿಗೆ ಅರ್ಧಚಮಚ ಅರಸಿನಹುಡಿ ಹಾಕಿ ಮೂರ್ನಾಲ್ಕು ನಿಮಿಷ ಕುದಿಸಿ ಸೋಸಿ ಕುಡಿದರೆ ಅಲರ್ಜಿ ಶೀತಗಳಿಗೆ ಅದು ರಾಮಬಾಣ. ಅಮೃತಬಳ್ಳಿಯ ನಾಲ್ಕು ಎಲೆಗಳನ್ನು ಹಾಗೆಯೇ ಜಗಿದು ನುಂಗಿದರೆ ಅದು ವ್ಯಾಧಿಕ್ಷಮತ್ವ ಹೆಚ್ಚಿಸುವ ಅತ್ಯುತ್ತಮ ವಿಧಾನ. ಅರ್ಧ ಹಿಪ್ಪಲಿಯನ್ನು ಜೇನುತುಪ್ಪದೊಂದಿಗೆ ಅರೆದು ಸೇವಿಸುವುದೂ ಬಹೂಪಯೋಗಿ. ಒಂದು ಬೆಟ್ಟದ ನೆಲ್ಲಿಕಾಯಿಯನ್ನು ವಿಭಿನ್ನ ರೂಪದಲ್ಲಿ ನಿತ್ಯ ಸೇವಿಸಿದರೂ ಆದೀತು. ನೆಲನೆಲ್ಲಿಯ ಗಿಡವನ್ನು ತುಂಡರಿಸಿ ನಾಲ್ಕುಗ್ಲಾಸು ನೀರಿಗೆ ಹಾಕಿ ಅರ್ಧವಾಗುವ ತನಕ ಕುದಿಸಿ ಸೋಸಿ ದಿನಕ್ಕೊಮ್ಮೆ ಕುಡಿಯುವುದು ವೈರಾಣು ದಾಳಿ ತಡೆಯಲು ಇರುವ ಅಪ್ರತಿಮ ಮಾರ್ಗ. ಇದೇ ರೀತಿ ಸೊಗದೆಬೇರು, ಪರ್ಪಟಕ, ಕಹಿಬೇವು, ಕಿರಾತಕಡ್ಡಿ ಮೊದಲಾದವುಗಳಲ್ಲಿ ಯಾವುದಾದರು ಒಂದರ ಕಷಾಯ ಮಾಡಿ ಸೇವಿಸುವುದೂ ಪರಿಣಾಮಕಾರಿ. ಎಲ್ಲಕ್ಕಿಂತಲೂ ಮುಖ್ಯವಾಗಿ ಅಡುಗೆ ಕೋಣೆಯಲ್ಲಿರುವ ಸಾಂಬಾರ ಪದಾರ್ಥಗಳನ್ನು ಪ್ರಾಶಸ್ತ್ಯ ನೀಡಿ ಆಹಾರ ವ್ಯಂಜನಗಳಲ್ಲಿ ಬಳಸಿದರೆ ಶ್ವಾಸಕೋಶ ಬಲಿಷ್ಠವಾಗಿದ್ದು ವೈರಾಣು ಕನಿಷ್ಠವಾಗುತ್ತದೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net