

ಇದು ಸಾಮಾಜಿಕ ಜಾಲತಾಣಗಳ ಯುಗ. ಒಂದು ಹೊತ್ತು ಊಟವಿಲ್ಲದಿದ್ದರೂ ಪರವಾಗಿಲ್ಲ ಆದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ಸುತ್ತು ಹಾಕಿ ಬರಲೇಬೇಕು. ಕೈಯಲ್ಲಿ ಮೊಬೈಲ್ ಇದ್ದಾಗ ವಾಸ್ತವ ಜಗತ್ತನ್ನೇ ಮರೆತು, ಭ್ರಮಾ ಲೋಕದಲ್ಲಿ ಮುಳುಗಿರುತ್ತಾರೆ. ಎಲ್ಲ ಯುವಕರು ಮೊಬೈಲ್ ಮೋಡಿಯಲ್ಲಿ ಬಿದ್ದಿದ್ದಾರೆ. ಒಮ್ಮೆ ಫೋನಿನಲ್ಲಿ ಮಗ್ನರಾದರೆ ಸಾಕು ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದೇ ತಿಳಿಯುವುದಿಲ್ಲ.
ಇದಿಷ್ಟು ಒಂದು ಭಾಗವಾದರೆ, ಮತ್ತೊಂದೆಡೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ರೀಲ್ಟ್, ಶಾರ್ಟ್ಸ್ ಎಂಬ ವಿಡಿಯೋಗಳನ್ನು ಮಾಡುತ್ತಾರೆ. ರೀಲ್ಸ್ ಉನ್ಮಾದದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಲು ಅಪಾಯವನ್ನು ತಮ್ಮ ಬಳಿಗೆ ಎಳೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ, ಯುವಕರು ಮತ್ತು ಯುವತಿಯರು ಇಂತಹ ಹುಚ್ಚು ಕೆಲಸಕ್ಕೆ ಕೈಹಾಕಿರುವುದನ್ನು ನೋಡಿದ್ದೀರಿ. ಇದೀಗ ಶಾಲಾ ಮಕ್ಕಳು ಸಹ ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿನಿಯರಿಬ್ಬರ ಅಪಾಯಕಾರಿ ಸಾಹಸ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ಇಬ್ಬರು ಶಾಲಾ ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ಹಾಗೂ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಅಪಾಯಕಾರಿ ಸಾಹಸ ಮಾಡಿದ್ದಾರೆ. ಆದರೆ, ಆ ಸಾಹಸದ ಕೊನೆಯಲ್ಲಿ ಒಂದು ಮಾರಣಾಂತಿಕ ಘಟನೆ ಸಹ ನಡೆದಿದೆ. ಇದೀಗ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಡಿಯೋದಲ್ಲಿ ಏನಿದೆ? ವಿಡಿಯೋದಲ್ಲಿ ಶಾಲಾ ಸಮವಸ್ತ್ರದಲ್ಲಿ ಇಬ್ಬರು ಹುಡುಗಿಯರು ಹೆದ್ದಾರಿ ಮಧ್ಯದಲ್ಲಿ ನಿಂತಿದ್ದಾರೆ. ಅವರ ಹಿಂದೆ ಒಂದು ಬಿಳಿ ಕಾರು ನಿಂತಿದೆ. ಇನ್ನಿಬ್ಬರು ಶಾಲಾ ವಿದ್ಯಾರ್ಥಿನಿಯರು ಕಾರಿನ ಬಳಿ ನಿಂತು ನೋಡುತ್ತಿದ್ದಾರೆ. ಹೆದ್ದಾರಿಯಲ್ಲಿ ಕಾರುಗಳು ಸಹ ಅತಿವೇಗದಲ್ಲಿ ಹೋಗುತ್ತಿವೆ. ಇದರ ನಡುವೆ ಶಾಲಾ ಬಾಲಕಿಯರು ನಡುರಸ್ತೆಯಲ್ಲೇ ಸಾಹಸ ಪ್ರದರ್ಶನ ಮಾಡಿದ್ದಾರೆ. ಮೊದಲು ಹುಡುಗಿಯೊಬ್ಬಳು ಇನ್ನೊಬ್ಬ ಹುಡುಗಿಯ ಕೈಗಳನ್ನು ಹಿಡಿದು ತನ್ನ ಕಾಲುಗಳನ್ನು ತೊಡೆಯ ಮೇಲೆ ಇರಿಸಿ, ಭುಜದ ಮೇಲೆ ಏರುತ್ತಾಳೆ. ಇದಾದ ಬಳಿಕ ಗಾಳಿಯಲ್ಲಿ ವೇಗವಾಗಿ ಹಾರಿ, ಪಲ್ಟಿಯಾಗಿ ಕೆಳಗೆ ಬೀಳುತ್ತಾಳೆ. ಆದರೆ, ಬಾಲಕಿಯ ಕಾಲಿನ ಸಮತೋಲನ ತಪ್ಪಿ ರಸ್ತೆಗೆ ಬೀಳುತ್ತಾಳೆ. ಇದಿಷ್ಟು ದೃಶ್ಯ ವಿಡಿಯೋದಲ್ಲಿದೆ.
ವಿಡಿಯೋ ನೋಡಿದರೆ ರಸ್ತೆಯಲ್ಲಿ ಬಿದ್ದ ಬಳಿಕ ವಿದ್ಯಾರ್ಥಿನಿಗೆ ಏಟು ಜೋರಾಗಿ ಬಿದ್ದಿರುವಂತೆ ಕಾಣುತ್ತದೆ. ಏಕೆಂದರೆ, ಆ ಹುಡುಗಿ ಎದ್ದು ನಿಲ್ಲಲು ಸಾಧ್ಯವಾಗುವುದಿಲ್ಲ. ಅಲ್ಲದೆ ಪಕ್ಕದಲ್ಲಿದ್ದ ಸ್ನೇಹಿತೆ ಆಕೆಯನ್ನು ಎತ್ತಿ ಸಾಂತ್ವನ ಹೇಳುತ್ತಾಳೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಶಾಲಾ ಮಕ್ಕಳ ಈ ಸಾಹಸದ ವಿಡಿಯೋವನ್ನು ನೆಟ್ಟಿಗರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಮೇಲಾಗಿ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಫೆಬ್ರವರಿ 17 ರಂದು ಜನಪ್ರಿಯ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 17 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಆದರೆ, ಈ ವಿಡಿಯೋ ನೋಡಿದವರೆಲ್ಲರೂ ಓದಬೇಕಾದ ವಿದ್ಯಾರ್ಥಿಗಳೇ ರೀಲ್ ಹೆಸರಿನಲ್ಲಿ ಈ ರೀತಿ ಹೆದ್ದಾರಿಯಲ್ಲಿ ಅಪಾಯಕಾರಿ ಸಾಹಸ ಮಾಡುವುದು ಎಷ್ಟು ಸರಿ ಎಂದು ಟೀಕಿಸುತ್ತಿದ್ದಾರೆ. (ಏಜೆನ್ಸೀಸ್)