ಲಾಲ್‌ಬಾಗ್ ತೋಟಕ್ಕೆ ಅಪಾಯ: ಆತಂಕ | Threat by tunnel road

R Ashok
Published on

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು, ಗ್ರೇಟರ್ ಬೆಂಗಳೂರು ಪ್ರಾಧಿಕಾರವೆಂದು ದೊಡ್ಡದಾಗಿ ಬಿಂಬಿಸಿಕೊಂಡು ಸುಗಮ ಸಂಚಾರಕ್ಕೆ ಸುರಂಗ ಮಾರ್ಗ ಮಾಡಿಯೇ ಸಿದ್ಧವೆಂಬ ಹುಚ್ಚುತನ, ಶುದ್ಧ ಆಮ್ಲಜನಕ ತಾಣ ಲಾಲ್‌ಬಾಗ್ ಸಸ್ಯೋದ್ಯಾನವನಕ್ಕೆ ಕುತ್ತು ತಂದಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.

ಸುರಂಗ ಮಾರ್ಗದ ರಸ್ತೆ ನಿರ್ಮಾಣ ಯೋಜನೆಯು ಲಾಲ್‌ಬಾಗ್‌ಗೆ ಅಪಾಯ ತರಲಿದೆ ಎಂಬ ತಜ್ಞರ ಎಚ್ಚರಿಕೆಯತ್ತ ಗಮನಸೆಳೆದು, ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಂದಿಡುತ್ತಿರುವ 26 ಸಾವಿರ ಕೋಟಿ ರೂ. ವೆಚ್ಚದ ಅಜಾಗರೂಕ ಸುರಂಗ ರಸ್ತೆ ಯೋಜನೆಯಿಂದ ಬೆಂಗಳೂರಿನ ಹೆಮ್ಮೆ, ಹಸಿರು ಶ್ವಾಸಕೋಶ ಹಾಗೂ ಜೀವಂತ ಪರಂಪರೆಯಾದ ಲಾಲ್‌ಬಾಗ್ ಗಂಭೀರ ಅಪಾಯದಲ್ಲಿದೆ ಎಂದಿದ್ದಾರೆ.

ಒಬ್ಬ ವ್ಯಕ್ತಿಯ ಪ್ರಚಾರ ಮತ್ತು ವ್ಯಾನಿಟಿ ಯೋಜನೆಗಾಗಿ ಸಾವಿರಾರು ಮರಗಳನ್ನು ಕಡಿಯಲಾಗುತ್ತಿದೆ. ಲಾಲ್‌ಬಾಗ್‌ನ್ನು ಅಪಾಯಕ್ಕೆ ದೂಡಲಾಗುತ್ತಿದ್ದು, ಪರಿಸರ ವ್ಯವಸ್ಥೆಗೆ ಭಾರಿ ಪೆಟ್ಟು ನೀಡಲಿದೆ ಎಂದು ತಜ್ಞರು, ನಾಗರಿಕ ಗುಂಪುಗಳು, ಪರಿಸರವಾದಿಗಳು ಪ್ರತಿರೋಧ ವ್ಯಕ್ತ ಮಾಡಿದ್ದರೂ ಸರ್ಕಾರ ಮುಂದೆ ಸಾಗುತ್ತಿರುವುದರ ಔಚಿತ್ಯವೇನು ? ಎಂದು ಪ್ರಶ್ನಿಸಿದ್ದಾರೆ.

ನಾಶಪಡಿಸುವ ಹಕ್ಕಿಲ್ಲ

ಲಾಲ್‌ಬಾಗ್ ಕೇವಲ ಮತ್ತೊಂದು ಭೂಮಿಯ ತುಂಡು ಅಲ್ಲ. ರಾಜ್ಯದ ನಿಧಿ, ಬೆಂಗಳೂರಿನ ಹೆಮ್ಮೆ. ಮಕ್ಕಳ ಆಮ್ಲಜನಕ, ಪರಿಸರ ಕಾಳಜಿಯ ಹೆಗ್ಗುರುತು. ರಾಜಕೀಯ ಅಧಿಕಾರದ ಗತ್ತು ಪ್ರದರ್ಶನಕ್ಕೆ ಅದನ್ನು ನಾಶಪಡಿಸುವ ಹಕ್ಕು ಯಾರಿಗೂ ಇಲ್ಲವೆಂದು ಆರ್.ಅಶೋಕ್ ಹೇಳಿದ್ದಾರೆ.

ಲಾಲ್‌ಬಾಗ್ ಉಳಿಸಿ ಬೆಳೆಸಬೇಕೆಂಬ ನಿಲುವಿಗೆ ಬಿಜೆಪಿ ಬೆಂಬಲಿಸುತ್ತದೆ. ಶುದ್ಧ ಗಾಳಿಯ ತಾಣದ ಜತೆಗೆ ಮಕ್ಕಳ ಪಾಲಿನ ಬಹು ಮುಖ್ಯ ವಿಹಾರ ತಾಣವಾಗಿದೆ. ತಜ್ಞರು, ಪರಿಸರವಾದಿಗಳ ಎಚ್ಚರಿಕೆ ಮಾತಿಗೆ ಸಿಎಂ ಸಿದ್ದರಾಮಯ್ಯ ಕಿವಿಗೊಡಬೇಕು ಎಂದು ಪಕ್ಷ ಒತ್ತಾಯಿಸುತ್ತದೆ.

ಕಾಂಗ್ರೆಸ್ ಪಕ್ಷದ ಆಡಳಿತ ಹಸಿರು ಪರಂಪರೆ, ಪರಿಸರವನ್ನು ನಾಶಪಡಿಸಲು ಮುಂದಾಗಿದ್ದು, ಈ ವಿಷಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೌನ ಮುರಿದು, ಮಧ್ಯೆ ಪ್ರವೇಶಿಸುತ್ತಾರೆಯೆ ? ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net