

ಸಾಗರ: ಕಲೆಯ ಸಂಗಡ ನಿರಂತರ ಕೆಲಸ ಮಾಡುವುದು ಸುಲಭದ ಕೆಲಸವಲ್ಲ. ನೃತ್ಯ ಕಲಿಸುವ ಜತೆಗೆ ಸಂಘಟನೆ, ಸಂಶೋಧನೆ ಮಾಡುವುದು ಸವಾಲಿನ ಕೆಲಸ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ಹೇಳಿದರು.
ಸಾಗರದ ನೃತ್ಯಭಾಸ್ಕರ ಸಭಾಂಗಣದಲ್ಲಿ ನಾಟ್ಯತರಂಗ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಗರದಲ್ಲಿ ವಿದ್ವಾನ್ ಜನಾರ್ದನ್ ನೃತ್ಯ ಕಲಿಕೆ ಜತೆಗೆ ಹಲವು ಆಯಾಮಗಳನ್ನು ಸಂಶೋಧಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಾಗರ ಸಾಂಸ್ಕೃತಿಕವಾಗಿ ಭದ್ರ ನೆಲೆಯನ್ನು ಹೊಂದಿದೆ. ಅನೇಕ ಸಂಗೀತ ನೃತ್ಯ ವಿದ್ಯಾಲಯಗಳು ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿವೆ. ನಾಟ್ಯತರಂಗ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಕಲೆಯನ್ನು ಧಾರೆ ಎರೆಯುವ ಸಾರ್ಥಕ ಕೆಲಸ ಮಾಡಿದೆ ಎಂದು ಹೇಳಿದರು.
ವೈದ್ಯ ಕಿಶನ್ ಭಾಗವತ್ ಮಾತನಾಡಿ, ಕಲೆ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಶ್ರೇಯೋಭಿವೃದ್ಧಿಗೆ ಸಹಕಾರಿ. ನಮ್ಮ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಇಂತಹ ಸಪ್ತಾಹಗಳು ಮಾಡುತ್ತಿದೆ. ವಿದ್ವಾನ್ ಜನಾರ್ದನ್ ಮತ್ತವರ ಸಂಸ್ಥೆ ಅನೇಕ ವರ್ಷಗಳಿಂದ ನೃತ್ಯ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿರುವುದು ಗಮನಾರ್ಹ ಸಂಗತಿ ಎಂದರು.
ನಂತರ ಶ್ರೀನಿಧಿ ಹೊಳ್ಳ ಅವರಿಂದ ಯಕ್ಷಗಾನ, ವಂದನಾ ಸುಪ್ರಿಯ ಅವರಿಂದ ಒಡಿಸ್ಸಿ ನತ್ಯ ಪ್ರದರ್ಶನ, ವಿಶ್ವನಾಥ್ ಶಿರೋಡ್ಕರ್ ಮತ್ತು ತಂಡದಿಂದ ಕಥಕ್, ನಾಟ್ಯತರಂಗ ವಿದ್ಯಾರ್ಥಿಗಳಿಂದ ವಿವಿಧ ನತ್ಯಗಳು ಪ್ರದರ್ಶನಗೊಂಡವು.
ಶುಭಾ ಧನಂಜಯ್ ಅವರಿಗೆ ಸಾಂಸ್ಕೃತಿಕ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಗರಸಭಾ ಸದಸ್ಯ ಟಿ.ಡಿ.ಮೇಘರಾಜ್, ಐ.ವಿ.ಹೆಗಡೆ, ವಿದ್ವಾನ್ ಜಿ.ಬಿ.ಜನಾರ್ದನ್, ಸಮುದ್ಯತಾ, ಆರತಿ ಇತರರಿದ್ದರು.