ಖಾಸಗಿ ರೆಸಾರ್ಟ್​​ನಲ್ಲಿ ಭರ್ಜರಿ ಬೆಲ್ಲಿ ಡಾನ್ಸ್​ ಪಾರ್ಟಿ; ವಿಡಿಯೋ ವೈರಲ್​ ಆಗ್ತಿದ್ದ ಹಾಗೆ 6 ಮಂದಿ ಅರೆಸ್ಟ್​

Belly Dance
Published on

ತಿರುವನಂತಪುರ: ಕೊವಿಡ್​-19 ಪ್ರಸರಣ ಹೆಚ್ಚುತ್ತಿದೆ. ಅದರ ನಿಯಂತ್ರಣ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರಗಳು ಜಾರಿಗೊಳಿಸಿರುವ ಲಾಕ್​ಡೌನ್​ ನಿಯಮಗಳನ್ನು ಅದೆಷ್ಟೋ ಜನರು ಸರಿಯಾಗಿ ಪಾಲಿಸುತ್ತಿಲ್ಲ. ಇದರಿಂದ ವೈರಸ್​ ಹಬ್ಬುವುದೂ ಹೆಚ್ಚುತ್ತಿದೆ.

ಇದೀಗ ಲಾಕ್​ಡೌನ್​ ನಿಯಮಗಳನ್ನೆಲ್ಲ ಬದಿಗೊತ್ತಿ, ಭರ್ಜರಿ ಡ್ಯಾನ್ಸ್​ ಪಾರ್ಟಿ ನಡೆಸಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಡುಕ್ಕಿ ಜಿಲ್ಲೆಯ ಉಡುಂಬಂಚೋಲಾದಲ್ಲಿರುವ ಖಾಸಗಿ ರೆಸಾರ್ಟ್​​ವೊಂದರಲ್ಲಿ ಮಂಗಳವಾರ ಬೆಲ್ಲಿ ಡ್ಯಾನ್ಸ್​ ಪಾರ್ಟಿ ನಡೆಸಿದವರನ್ನೆಲ್ಲ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಈ ಪಾರ್ಟಿಯಲ್ಲಿ ಉಕ್ರೇನ್​ ದೇಶದ ನೃತ್ಯಗಾರ್ತಿಯೂ ಇದ್ದರು. ಬೆಲ್ಲಿ ಡ್ಯಾನ್ಸ್​ ಪಾರ್ಟಿಯ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ಯಾವುದೋ ಒಂದು ಸಂಸ್ಥೆಯ ಉದ್ಘಾಟನೆ ಸಮಾರಂಭದ ನಿಮಿತ್ತ ಡ್ಯಾನ್ಸ್​ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಭಾಗವಹಿಸಿದವರು ಕೊವಿಡ್-19 ಪ್ರೊಟೊಕಾಲ್​​ನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದರು.

ಖಾಸಗಿ ರೆಸಾರ್ಟ್​ ಮ್ಯಾನೇಜರ್​ ಸೇರಿ ಒಟ್ಟು ಆರು ಮಂದಿಯನ್ನು ನಾವೀಗ ಬಂಧಿಸಿದ್ದೇವೆ. ಸಮಾರಂಭದಲ್ಲಿ ಇಷ್ಟೇ ಅಲ್ಲ. ಇನ್ನೂ ಹಲವರು ಇದ್ದರು. ಅವರನ್ನೂ ಬಂಧಿಸಲಾಗುವುದು. ಎರ್ನಾಕುಲಂ ಮತ್ತು ಕೊಚ್ಚಿಯಲ್ಲಿ ವಾಸವಾಗಿರುವ ಉಕ್ರೇನ್​ ದೇಶದವರೊಬ್ಬರು ಈ ಪಾರ್ಟಿಯಲ್ಲಿ ಡ್ಯಾನ್ಸ್​ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾ ಸೇನೆ ಹಿಂದೆ ಸರಿದರೂ ಕಾಂಗ್ರೆಸ್​ಗಿಲ್ಲ ಸಮಾಧಾನ; 2013ರಲ್ಲಿ ಮೋದಿಯವರು ಮಾಡಿದ್ದ ಟ್ವೀಟ್​ಗೆ ಈಗ ಉತ್ತರ ಬೇಕಂತೆ…

ಪಾರ್ಟಿಯಲ್ಲಿ ಭಾಗವಹಿಸಿದ್ದವರ ವಿವರವನ್ನು ಸಂಗ್ರಹಿಸಲಾಗುತ್ತಿದೆ. ನಮಗೆ ಪಾರ್ಟಿಯ ಬಗ್ಗೆ ಯಾರೂ ದೂರು ಕೊಟ್ಟಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ವಿಡಿಯೋ ನೋಡಿಕೊಂಡು ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net