ಚೀನಾ ಸೇನೆ ಹಿಂದೆ ಸರಿದರೂ ಕಾಂಗ್ರೆಸ್​ಗಿಲ್ಲ ಸಮಾಧಾನ; 2013ರಲ್ಲಿ ಮೋದಿಯವರು ಮಾಡಿದ್ದ ಟ್ವೀಟ್​ಗೆ ಈಗ ಉತ್ತರ ಬೇಕಂತೆ...

Shashi taroor
Published on

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್​ ಯಿ ಅವರ ನಡುವಿನ ದೂರವಾಣಿ ಮಾತುಕತೆಯ ಬಳಿಕ ಚೀನಾ ಗಲ್ವಾನ್​ ಕಣಿವೆಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ವಿವಾದಿತ ಸ್ಥಳಗಳಾದ ಗಲ್ವಾನ್​, ಹಾಟ್​ಸ್ಟ್ರಿಂಗ್ಸ್​ ಮತ್ತು ಗೋಗ್ರಾ ನೆಲೆಗಳಿಂದ ಚೀನಾ ಸೈನಿಕರು 1.5ಕಿ.ಮೀ.ಹಿಂದಕ್ಕೆ ಸರಿದಿವೆ. ಅದಕ್ಕೆ ಪ್ರತಿಯಾಗಿ ಭಾರತದ ಯೋಧರೂ ಕೂಡ ಗಲ್ವಾನ್​ ಕಣಿವೆಯಿಂದ ವಾಪಸ್ ಬರುತ್ತಿವೆ.

ಜೂ.15ರಂದು ಗಲ್ವಾನ್​ನಲ್ಲಿ ನಡೆದ ಸಂಘರ್ಷದ ಬಳಿಕ ಎರಡೂ ದೇಶಗಳ ಸೈನಿಕರು ಅಪಾರ ಸಂಖ್ಯೆಯಲ್ಲಿ ಎಲ್​ಎಸಿ ಬಳಿ ಬೀಡುಬಿಟ್ಟಿದ್ದವು. ಆದರೆ ಈ ಮಹತ್ವದ ಬೆಳವಣಿಗೆಯೂ ಕಾಂಗ್ರೆಸ್​​ಗೆ ಖುಷಿ ಕೊಡಲಿಲ್ಲ. ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್​ ಶಶಿ ತರೂರ್​ ಮತ್ತು ರಣದೀಪ್​ ಸುರ್ಜೇವಾಲಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನೆ ಮಾಡಿದ್ದಾರೆ.

2013ರಲ್ಲಿ ಯುಪಿಎ ಸರ್ಕಾರದ ಆಡಳಿತ ಇದ್ದಾಗಲೂ ಲಡಾಖ್​​ನ ದೇಪ್ಸಾಂಗ್ ಕಣಿವೆಯಲ್ಲಿ ಚೀನಾ ಕ್ಯಾತೆ ತೆಗೆದಿತ್ತು. ಚೀನಾ ಸೈನಿಕರು ಭಾರತದ ಭೂಪ್ರದೇಶದೊಳಗೆ ಸುಮಾರು 10 ಕಿ.ಮೀ ದೂರ ಪ್ರವೇಶ ಮಾಡಿ, ಟೆಂಟ್​ಗಳನ್ನು ಹಾಕಿ ಬೀಡುಬಿಟ್ಟಿದ್ದರು. ಅವರನ್ನು ಎದುರಿಸಲು ಭಾರತೀಯ ಸೈನಿಕರೂ ಸಿದ್ಧರಾಗಿ ಅದೇ ಸ್ಥಳದಲ್ಲಿ ಜಮಾವಣೆಗೊಂಡಿದ್ದರು. ನಂತರ ಸತತ ಮಾತುಕತೆ ಬಳಿಕ ಚೀನಾ ಸೈನಿಕರು ದೇಪ್ಸಾಂಗ್​​ನಿಂದ ಹೊರಹೋಗಿದ್ದರು. ಈ ಬಗ್ಗೆ ಅಂದಿನ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರರಾಗಿದ್ದ ಸೈಯದ್​ ಅಕ್ಬರುದ್ದೀನ್​ ಅವರು ಹೇಳಿಕೆ ಬಿಡುಗಡೆ ಮಾಡಿ, ಚೀನಾ ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿದೆ. ಅದರಂತೆ ಭಾರತೀಯ ಸೈನಿಕರೂ ವಾಪಸ್​ ಬರಲಿದ್ದಾರೆ ಎಂದಿದ್ದರು. ಅವರ ಹೇಳಿಕೆಗೆ ಪ್ರತಿಯಾಗಿ ಅಂದಿನ ಗುಜರಾತ್​ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಟ್ವೀಟ್​ವೊಂದನ್ನು ಮಾಡಿದ್ದರು. ಚೀನಾ ಅದರ ಸೇನಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುತ್ತಿದೆ ಒಪ್ಪಿಕೊಳ್ಳೋಣ. ಆದರೆ ಭಾರತದ ಭೂಪ್ರದೇಶದಿಂದ ಭಾರತವೂ ಏಕೆ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದೆ? ನಾವೇಕೆ ಹಿಂದೆ ಸರಿಯಬೇಕು? ಈ ನಡೆಯ ಬಗ್ಗೆ ನನಗೆ ಆಶ್ಚರ್ಯವಾಗುತ್ತಿದೆ ಎಂದು ಟ್ವೀಟ್​ ಮಾಡಿದ್ದರು. ಇದನ್ನೂ ಓದಿ: ವೇತನ ತಾರತಮ್ಯ ಸರಿಪಡಿಸಲು ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಶುಶ್ರೂಷಕರ ಪ್ರತಿಭಟನೆ

ಇದೀಗ 2013ರಲ್ಲಿ ನರೇಂದ್ರ ಮೋದಿಯವರು ಮಾಡಿದ್ದ ಟ್ವೀಟ್​​ನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಂಡಿರುವ ಶಶಿ ತರೂರ್​ ಮತ್ತು ರಣದೀಪ್​ ಸರ್ಜೇವಾಲಾ ನರೇಂದ್ರ ಮೋದಿಯವರನ್ನು ಟೀಕಾತ್ಮಕವಾಗಿ ಪ್ರಶ್ನಿಸಿದ್ದಾರೆ.

ನಾನು ನರೇಂದ್ರ ಮೋದಿಯವರ ಈ ಪ್ರಶ್ನೆಯ ಪರವಾಗಿ ನಾನು ನಿಲ್ಲುತ್ತೇನೆ. ಅಂದು ಅವರು ಕೇಳಿದ್ದ ಈ ಪ್ರಶ್ನೆಗೆ ಇಂದು ಪ್ರಧಾನಿಯವರೇ ಉತ್ತರಿಸಬೇಕು ಎಂದು ಶಶಿ ತರೂರ್​ ಟ್ವೀಟ್​ ಮಾಡಿದ್ದಾರೆ. ಇದನ್ನೂ ಓದಿ: ಗಲ್ವಾನ್​ ಕಣಿವೆಯಲ್ಲಿ ಪಿಪಿ 14ರವರೆಗೆ ಗಸ್ತು, ಭಾರತೀಯ ಯೋಧರ ಘೋಷಣೆ

ಹಾಗೇ ರಣದೀಪ್​ ಸಿಂಗ್​ ಸರ್ಜೇವಾಲಾ ಟ್ವೀಟ್​ ಮಾಡಿ, ಗೌರವಾನ್ವಿತ ಪ್ರಧಾನಿಯವರೇ, ಅಂದು ನೀವಾಡಿದ ಮಾತುಗಳು ನಿಮಗೆ ನೆನಪಿದೆಯೇ? ಆ ಮಾತುಗಳಿಗೆ ಬೆಲೆ ಇದೆಯಾ? ಇವತ್ತು ಯಾಕೆ ಭಾರತದ ಸೈನಿಕರು ಭಾರತದ ಭೂಪ್ರದೇಶದಿಂದ ಹಿಂದೆ ಸರಿದಿದ್ದಾರೆ. ಚೀನಾ ಗಲ್ವಾನ್​ನಿಂದ ವಾಪಸ್​ ಹೋಗುವುದು ಸರಿ, ಆದರೆ ಭಾರತೀಯ ಸೈನಿಕರು ಯಾಕೆ ವಾಪಸ್​ ಬರಬೇಕು? ಈ ಪ್ರಶ್ನೆಗೆ ಇಡೀ ದೇಶ ಉತ್ತರ ಬಯಸುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net