

ಮುಧೋಳ: ಭಾರತ ಕಲೆ, ಸಾಹಿತ್ಯ, ಸಂಸಕ್ಕತಿಯ ತವರೂರು. ಇಂತಹ ಮುಖ್ಯಭೂಮಿಕೆಗೆ ಕಾರಣವಾದದ್ದು ದಾನಮ್ಮ ಉತ್ಸವವಾಗಿದೆ ಎಂದು ಪ್ರಾಚಾರ್ಯ ಪ್ರೊ. ಎಂ.ಎಂ. ಹಿರೇಮಠ ಹೇಳಿದರು.
ನಗರದ ಬಾಗಲಕೋಟೆ ಬವಿವಿ ಸಂಘದ ದಾನಮ್ಮದೇವಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ದಾನಮ್ಮ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಪ್ರಮುಖ ರಸ್ತೆಯಲ್ಲಿ ದಾನಮ್ಮ ಬುತ್ತಿ ಹೊತ್ತ ವಿದ್ಯಾರ್ಥಿನಿಯರಿಂದ ಕುಂಭ, ಆರತಿಯೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಜರುಗಿತು. ನಂತರ ಉತ್ತರ ಕರ್ನಾಟಕದ ಇಲಕಲ್ಲ ಸೀರೆಯಲ್ಲಿ ದಾನಮ್ಮ ಉತ್ಸವ ನಾಮಾಂಕಿತ ಬ್ಯಾನರ್ ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.
ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಎಲ್ಲ ಸಿಬ್ಬಂದಿ ದಾನಮ್ಮ ಬುತ್ತಿಯ ಊಟ ಸವಿದು ಸಂಭ್ರಮಿಸಿದರು. ಉತ್ಸವದ ನಿಮಿತ್ತವಾಗಿ ಮಹಾವಿದ್ಯಾಲಯದ ಕಲಾ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಿಗಾಗಿ ಬಿಂದಿ ಹಚ್ಚುವ ಸ್ಪರ್ಧೆ, ಚೇರ್ ಮತ್ತು ಬಾಟಲ್ ಗೇಮ್, ಜಾನಪದ ನೃತ್ಯ ಮತ್ತಿತರ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಐಕ್ಯೂಎಸಿ ಮುಖ್ಯಸ್ಥ ಎ.ಎನ್. ಬಾಗೇವಾಡಿ ಸೇರಿ ಬೋಧಕ-ಬೋಧಕೇರ ಸಿಬ್ಬಂದಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಎನ್.ಎನ್. ಬಾರಕೇರ ಸ್ವಾಗತಿಸಿದರು, ಮಲ್ಲಿಕಾರ್ಜುನ ಎಂ. ನಿರೂಪಿಸಿದರು ಹಾಗೂ ಎಸ್.ಕೆ. ಸಾರವಾಡ ವಂದಿಸಿದರು.