

Dam collapse: ಛತ್ತೀಸ್‌ಗಢದ ಬಲರಾಂಪುರ ಜಿಲ್ಲೆಯಲ್ಲಿ ಸಣ್ಣ ಅಣೆಕಟ್ಟಿನ ಒಂದು ಭಾಗ ಕುಸಿದ ಪರಿಣಾಮ ಪ್ರವಾಹ ಉಂಟಾಗಿ ಕನಿಷ್ಠ 4 ಮಂದಿ ಬಲಿಯಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ (ಸೆಪ್ಟೆಂಬರ್,03) ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸರ್ಕಾರಿ ಅಧಿಕಾರಿಯು, ಮನೆಯಲ್ಲಿ ಒಬ್ಬ ಮಹಿಳೆ ಮತ್ತು ಆಕೆಯ ಅತ್ತೆ ಸೇರಿದಂತೆ ನಾಲ್ವರು ಮನೆಗಳಲ್ಲಿ ಮಲಗಿದ್ದಾಗ ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರವಾಹದ ಮಾಹಿತಿ ತಿಳಿದ ನಂತರ ಜಿಲ್ಲಾಡಳಿತ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಧನೇಶ್‌ಪುರ ಗ್ರಾಮದಲ್ಲಿರುವ ಲೂಟಿ ಜಲಾಶಯದಲ್ಲಿ ಮಂಗಳವಾರ ತಡರಾತ್ರಿ ಸುರಿದ ಭಾರಿ ಮಳೆಯ ನಂತರ ಆಣೆಕಟ್ಟು ಒಡೆದಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, 1980ರ ದಶಕದ ಆರಂಭದಲ್ಲಿ ನಿರ್ಮಿಸಲಾದ ಈ ಜಲಾಶಯದ ನೀರು, ಒಡಕಿನ ಮೂಲಕ ಹತ್ತಿರದ ಮನೆಗಳು ಮತ್ತು ಕೃಷಿ ಹೊಲಗಳಿಗೆ ಇಳಿದು, ದಿಢೀರ್ ಪ್ರವಾಹಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಸ್ತಾರ್ ವಿಭಾಗದ ಪ್ರವಾಹ ಪೀಡಿತ ಬಸ್ತಾರ್ ಮತ್ತು ದಂತೇವಾಡ ಜಿಲ್ಲೆಗಳ ವೈಮಾನಿಕ ಮತ್ತು ಭೂ ಸಮೀಕ್ಷೆಗಳನ್ನು ಸಿಎಂ ವಿಷ್ಣು ದೇವ್ ಸಾಯಿ ನಡೆಸಿದ್ದಾರೆ. ಕಳೆದ ವಾರದ ಆರಂಭದಲ್ಲಿ ಭಾರಿ ಮಳೆಗೆ 8 ಜನರು ಮೃತಪಟ್ಟಿದ್ದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಯ ನಂತರ ಮಾತನಾಡಿದ ಸಿಎಂ ವಿಷ್ಣು ದೇವ್, ಅಧಿಕಾರಿಗಳಿಗೆ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ತ್ವರಿತಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ. ಪ್ರವಾಹ ಪೀಡಿತ ಕುಟುಂಬಗಳಿಗೆ ನೆರವು ನೀಡುವ ಬಗ್ಗೆ ರಾಜ್ಯದ ಆದ್ಯತೆಯನ್ನು ಒತ್ತಿ ಹೇಳಿದರು.
ಕಳೆದ ವಾರದ ಆರಂಭದಲ್ಲಿ ಸತತ ಮಳೆಯಿಂದ ದಂತೇವಾಡ, ಸುಕ್ಮಾ, ಬಿಜಾಪುರ ಮತ್ತು ಬಸ್ತಾರ್ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ ಉಂಟಾಗಿ ವಿಶಾಲ ಪ್ರದೇಶಗಳು ಮುಳುಗಿದ ನಂತರ 2,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.
ಛತ್ತೀಸ್‌ಗಢದಲ್ಲಿ ಪ್ರವಾಹವು 8 ಜೀವಗಳನ್ನು ಬಲಿ ತೆಗೆದುಕೊಂಡಿತು. 96 ಜಾನುವಾರುಗಳು ಮೃತಪಟ್ಟಿವೆ. ಅಲ್ಲದೆ, ಸುಮಾರು 495 ಮನೆಗಳು ಮತ್ತು 16 ಕಲ್ವರ್ಟ್‌ಗಳು ಮತ್ತು ಸೇತುವೆಗಳು ಹಾನಿಗೊಳಗಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ದಂತೇವಾಡಾದ ಚುಡಿತಿಕ್ರಾ ವಾರ್ಡ್‌ನಲ್ಲಿರುವ ಪರಿಹಾರ ಶಿಬಿರದಲ್ಲಿ ಸ್ಥಳಾಂತರಗೊಂಡವರೊಂದಿಗೆ ಸಿಎಂ ಸಂವಹನ ನಡೆಸಿದರು. ಪ್ರವಾಹದಿಂದ ನೊಂದ ಜನರಿಗೆ ಸರ್ಕಾರದ ಬೆಂಬಲ ನೀಡುವ ಭರವಸೆ ನೀಡಿದರು. ಪರಿಹಾರ ಶಿಬಿರಗಳಲ್ಲಿ ಆಹಾರ, ಶುದ್ಧ ಕುಡಿಯುವ ನೀರು ಮತ್ತು ಸುರಕ್ಷಿತ ಆಶ್ರಯವನ್ನು ನಿರಂತರವಾಗಿ ಪೂರೈಸುವಂತೆ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದರು.
ಈ ಪ್ರದೇಶದಲ್ಲಿ ಸ್ಥಾಪಿಸಲಾದ ಆರೋಗ್ಯ ಶಿಬಿರವನ್ನು ಪರಿಶೀಲಿಸಿದ ಸಿಎಂ ವಿಷ್ಣು ದೇವ್, ಔಷಧಿಗಳ ಲಭ್ಯತೆ, ವೈದ್ಯರ ನಿಯೋಜನೆ ಮತ್ತು ಪ್ರಾಥಮಿಕ ಆರೋಗ್ಯ ಸೇವೆಗಳ ಕುರಿತು ವಿವರಗಳನ್ನು ನೀಡುವಂತೆ ಹೇಳಿದ್ದಾರೆ. (ಏಜೆನ್ಸೀಸ್)