

ಬೆಂಗಳೂರು: ಹಾನಗಲ್, ಸಿಂಧಗಿ ಉಪ ಚುನಾವಣೆಯಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿದೆ. ಯಾರು ಎಷ್ಟು ಹಣ ಹಂಚಿದ್ದಾರೆಂದೂ ಮಾಹಿತಿ ಇದೆ. ಉಪ ಚುನಾವಣೆಯಲ್ಲಿ ಸರ್ಕಾರದ ಸ್ವೇಚ್ಛಾಚಾರ ನಡೆಯುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ದೀಪಾವಳಿ ಹಬ್ಬದ ಹಿನ್ನೆಲೆ ಯಲ್ಲಿ ಜೆಡಿಎಸ್ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ, ತಮಿಳುನಾಡಿನಲ್ಲಿ ಜಯಲಲಿತಾ ಅನೇಕ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಜ್ಯೋತಿ ಬಸು ಕೂಡ ಅಭ್ಯರ್ಥಿಗಳನ್ನು ನಿಲ್ಲಿಸಿರಲಿಲ್ಲ. ನಮಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಇಷ್ಟವಿರಲಿಲ್ಲ. ಕುಮಾರಸ್ವಾಮಿ ಒತ್ತಾಯ ಮಾಡಿ ಅಭ್ಯರ್ಥಿ ಹಾಕಿದರು. ಉಪ ಚುನಾವಣೆಗೆ ಯಾರು ಎಷ್ಟು ಶ್ರಮ ಪಟ್ಟರು ಎಂಬುದು ಗೊತ್ತಿದೆ. ್ಲ ಸಿಂದಗಿ ಕ್ಷೇತ್ರದಲ್ಲಿ 38 ಸಾವಿರ ಮುಸ್ಲಿಂ ಮತದಾರರು ಇದ್ದರು. ನಮಗಿಲ್ಲ ಅಂದರೆ ಆ ಮತಗಳು ಕಾಂಗ್ರೆಸ್ಗೆ ಹೋಗಿರುತ್ತವೆ. ದೇವೇಗೌಡರು ಅವರ ಮಗ ಸೇರಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ. ನಮ್ಮನ್ನು ಸೋಲಿಸಲು ಹೀಗೆ ಮಾಡಿದ್ದಾರೆ ಎಂದು ನಮ್ಮ ವಿರುದ್ಧ ಆಪಾದನೆ ಮಾಡಿದರು. ನಾಲ್ಕು ಸಾವಿರ ನಮಗೆ ಬಂದಿದೆ ಉಳಿದದ್ದು ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯ: ಪೆಟ್ರೋಲ್, ಡಿಸೇಲ್ ಮೇಲಿನ ಸುಂಕವನ್ನು ಸಿದ್ದರಾಮಯ್ಯ ಹೇಳಿದ್ದಕ್ಕೆ ಮೋದಿಯವರು ಇಳಿಸಿದ್ದಾರೆ. ಮೋದಿಯವರು ಇನ್ನು 3 ವರ್ಷ ಇರುತ್ತಾರೆ. ಸಿದ್ದರಾಮಯ್ಯ ಯಂಗಸ್ಟರ್ ಹಾಗಾಗಿ ಹೋರಾಟ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ಅಧ್ಯಕ್ಷರಿಗೂ ಟಾಂಗ್: ಎಂ.ಸಿ. ಮನಗೂಳಿಯವರೆ ಮಗನನ್ನು ಕಾಂಗ್ರೆಸ್ಗೆ ಕಳುಹಿಸುವ ಆಸೆ ಹೊಂದಿದ್ದರು ಎಂದು ಹೇಳುತ್ತಾರೆ. ಪ್ರಾಣ ಹೋಗುವ ಮೊದಲೇ ನನ್ನ ಮಗನನ್ನು ನಿಮ್ಮ ಕೈಗೆ ಕೊಟ್ಟಿದ್ದೇವೆ ಎಂದು ಹೇಳಿದ್ದರಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಮುಂಬರುವ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಕ್ರಿಯಾಶೀಲವಾಗಿ ಕೆಲಸ ಮಾಡಲು ತೀರ್ಮಾನ ಮಾಡಿದ್ದೇನೆ. ಎಲ್ಲರೂ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದರು.
ವಿದ್ಯುತ್ ಕೊರತೆ, ಕತ್ತಲೆಯತ್ತ ರಾಜ್ಯ: ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕೊರತೆ ತೀವ್ರವಾಗುತ್ತಿದ್ದು, ಸದ್ಯದಲ್ಲಿಯೇ ಕತ್ತಲಲ್ಲಿ ಕರ್ನಾಟಕ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ವಿದ್ಯುತ್ ಇತರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದೆವು. ಆದರೆ ಈಗ ಅಭಾವ ಸೃಷ್ಟಿಯಾಗಿದೆ ಎಂದರು.
ಸಿದ್ಧಾಂತ ಒಪ್ಪಿ ಬರಲಿ: ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬಂದರೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಸಿಂಧಗಿಯಲ್ಲಿ ಅಶೋಕ್ ಮನಗೊಳಿ ಅಭ್ಯರ್ಥಿ ಮಾಡುವ ಮೊದಲು ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿದ್ದೆವು. ಇನ್ನೂ ಹಲವರು ಪಕ್ಷಕ್ಕೆ ಬರುವವರು ಇದ್ದಾರೆ ಅವರನ್ನ ಬೇಡ ಎಂದು ಹೇಳಲ್ಲ. ಕೆಲವರು ನನಗೆ ಆಗದಿರಬಹುದು, ಇನ್ನೂ ಕೆಲವರು ಬೇರೆಯವರಿಗೆ ಆಗದಿರಬಹುದು, ಆದರೆ ಪಕ್ಷ ಮುಖ್ಯ ಎಂದು ಹೇಳಿದರು.