

ಹುಣಸೂರು : ದಲಿತರಿಗೆ ಮೀಸಲಿಟ್ಟಿದ್ದ ಸ್ಮಶಾನ ಒತ್ತುವರಿ ತೆರವುಗೊಳಿಸಿ ದಲಿತರು ಸಂಸ್ಕಾರ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ದಲಿತ ಮುಖಂಡರು ಮಾಡಿದ್ದ ಮನವಿಗೆ ತಾಲೂಕು ಆಡಳಿತ ಸ್ಪಂದಿಸಿ ಒತ್ತುವರಿ ತೆರವು ಕಾರ್ಯ ಆರಂಭಿಸಿದೆ.
ಈ ಕುರಿತು ವಿಜಯವಾಣಿಗೆ ಮಾಹಿತಿ ನೀಡಿದ ಹುಣಸೂರು ಉಪವಿಭಾಗ ಮಟ್ಟದ ಎಸ್‌ಸಿ, ಎಸ್ಟಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ, ತಾಲೂಕಿನ ಗಾವಡಗೆರೆ ಹೋಬಳಿ ಮಾಚಬಾಯನಹಳ್ಳಿ ಗ್ರಾಮದಲ್ಲಿ ದಲಿತ ಮಾದಿಗ ಜನಾಂಗಕ್ಕಾಗಿ ಸರ್ಕಾರ 1 ಎಕರೆ ಭೂಮಿಯನ್ನು ಮೀಸಲಿಟ್ಟಿದೆ. ಆದರೆ ಅದೇ ಗ್ರಾಮದ ಭೂ ಮಾಲೀಕರು ದಲಿತರ ಸ್ಮಶಾನವನ್ನು ಒತ್ತುವರಿ ಮಾಡಿಕೊಂಡು ಬೇಸಾಯ ಮಾಡುತ್ತಿದ್ದು, ದಲಿತರು ಯಾರಾದರೂ ಮರಣ ಹೊಂದಿದರೆ ಮಂಜೂರಾಗಿದ್ದ ಸ್ಮಶಾನ ಜಾಗದಲ್ಲಿ ಶವ ಸಂಸ್ಕಾರ ಮಾಡಲು ಅವಕಾಶ ಕೊಡದೆ ತೊಂದರೆ ಕೊಡುತ್ತಿದ್ದರು. ವಿಧಿಯಿಲ್ಲದೆ ದಲಿತರು ಭಯಭೀತಿಯಿಂದ ಅವರಿವರ ಜಮೀನಿನಲ್ಲಿ, ರಸ್ತೆ ಬದಿಗಳಲ್ಲಿ, ಕೆರೆಯ ಪಾಳು ಜಾಗದಲ್ಲಿ ಶವ ಸಂಸ್ಕಾರ ಮಾಡುವ ಸ್ಥಿತಿ ಇತ್ತು. ಈ ಕುರಿತು ತಾಲೂಕು ಆಡಳಿತಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸಲು ಕೋರಲಾಗಿತ್ತು. ಎಂದರು.
ಬುಧವಾರ ತಹಸೀಲ್ದಾರ್ ಮಂಜುನಾಥ್ ಗಾವಡಗೆರೆ, ಉಪ ತಹಸೀಲ್ದಾರ್ ಮತ್ತು ಇತರ ಕಂದಾಯಾಧಿಕಾರಿಗಳಿಗೆ ನಿರ್ದೇಶನ ನೀಡಿ ಸಮಸ್ಯೆಯನ್ನು ಖುದ್ದಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಗಾವಡಗೆರೆ ಉಪತಹಸೀಲ್ದಾರ್ ನೇತೃತ್ವದಲ್ಲಿ ಎಲ್ಲ ಕಂದಾಯಾಧಿಕಾರಿಗಳು ಮಾಚಬಾಯನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಂಜೂರಾಗಿದ್ದ 1 ಎಕರೆ ಜಾಗವನ್ನು ಪರಿಶೀಲಿಸಿ ಒತ್ತುವರಿ ಮಾಡಿಕೊಂಡಿದ್ದ ವ್ಯಕ್ತಿಗಳನ್ನು ಕರೆಯಿಸಿ ಸ್ಮಶಾನ ತೆರವುಗೊಳಿಸುವಂತೆ ಎಚ್ಚರಿಕೆ ನೀಡಿದರು.
ಉಪ ತಹಸೀಲ್ದಾರ್ ಅರುಣ್ ಕುಮಾರ್ ಮಾಹಿತಿ ನೀಡಿ, ಮಾಚಬಾಯನಹಳ್ಳಿ ಗ್ರಾಮದ 1 ಎಕರೆ ಸ್ಮಶಾನ ಮಂಜೂರಾಗಿದ್ದು ಈ ಸ್ಮಶಾನವನ್ನು ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿದೆ. ಇದರಿಂದ ದಲಿತರಿಗೆ ಶವ ಸಂಸ್ಕಾರ ಮಾಡಲು ತುಂಬ ತೊಂದರೆಯಾಗುತ್ತಿದೆ. ಕೂಡಲೇ ವರದಿ ಸಿದ್ಧಪಡಿಸಿ ತಹಸೀಲ್ದಾರ್‌ಗೆ ವರದಿ ನೀಡಿ ಅಳತೆ ಮಾಡಿಸಿ ಒತ್ತುವರಿಯಾಗಿರುವ ಸ್ಮಶಾನವನ್ನು ತೆರವುಗೊಳಿಸಿ ಮಾಚಬಾಯನಹಳ್ಳಿ ಗ್ರಾಮದ ದಲಿತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ರಾಜಸ್ವ ನಿರೀಕ್ಷಕರಾದ ಹೇಮಂತ್ ಕುಮಾರ್, ಗ್ರಾಮ ಆಡಳಿತಾಧಿಕಾರಿ ವಿಜಯ್ ಕುಮಾರ್, ಸಿದ್ದರಾಮು, ಸಹಾಯಕರಾದ ಅನಿಲ್ ಕುಮಾರ್, ನಂಜುಂಡ, ಮಾಚಬಾಯನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ಪುಟ್ಟಮ್ಮ, ಕುಮಾರಿ, ಮುಖಂಡರಾದ ಹರೀಶ, ಕೃಷ್ಣಯ್ಯ, ವೆಂಕಟೇಶ, ರಾಘವೇಂದ್ರ, ಬಿಳಿಗೆರೆ ಗ್ರಾಮದ ಯಜಮಾನರಾದ ಸಣ್ಣಯ್ಯ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.