ದಲಿತ ಕುಟುಂಬಗಳಿಗಿಲ್ಲ ನೌಕರಿ ಮಾಹಿತಿ; ಜಾಗೃತಿ ಕೊರತೆ

Front
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವ್ಯಕ್ತಿಯ ಕೊಲೆಯಾದಲ್ಲಿ ಆ ಕುಟುಂಬದ ಸದಸ್ಯ ಅಥವಾ ಅವರ ಅವಲಂಬಿತರಿಗಾಗಿ ಸರ್ಕಾರಿ ಉದ್ಯೋಗ ಸೌಲಭ್ಯದ ಅವಕಾಶವಿದ್ದರೂ ಜಾಗೃತಿ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಅನೇಕರಿಗೆ ಈ ಅನುಕೂಲ ಸಿಗುತ್ತಿಲ್ಲ.

ನೊಂದ ಕುಟುಂಬಗಳಿಗೆ ಸೌಲಭ್ಯ ತಲುಪಿಸಲು ಜಾಗೃತಿ ಮೂಡಿಸುತ್ತಿರುವ ರಾಜ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್​ಇ) ಪರಿಶ್ರಮದ ಫಲವಾಗಿ, ಈವರೆಗೆ 33 ಜನರಿಗೆ ಉದ್ಯೋಗ ಭಾಗ್ಯ ದಕ್ಕಿದೆ. ಆದರೂ ಅನೇಕ ಕುಟುಂಬಗಳು ಇದರ ಅರಿವೇ ಇಲ್ಲದೆ ಸೌಲಭ್ಯದಿಂದ ವಂಚಿತವಾಗುತ್ತಿವೆ.

3 ವರ್ಷದಲ್ಲಿ 163 ಹತ್ಯೆ: 2018, 2019 ಮತ್ತು 2020ರ ಆಗಸ್ಟ್ ವರೆಗೆ ರಾಜ್ಯದಲ್ಲಿ ಎಸ್​ಸಿ-ಎಸ್​ಟಿ ಸಮುದಾಯಕ್ಕೆ ಸೇರಿದ 163 ವ್ಯಕ್ತಿಗಳು ಕೊಲೆಯಾಗಿದ್ದಾರೆ. 2018ರ 1 ಪ್ರಕರಣದಲ್ಲಷ್ಟೇ ಶಿಕ್ಷೆಯಾಗಿದೆ. ಉಳಿದಂತೆ 113ರಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, 7 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಆಗಿದೆ. 23 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ.

ಅನುಸೂಚಿತ ಜಾತಿ, ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1995 ಕಲಂ 12(4)ರ ಪ್ರಕಾರ ಕೊಲೆಯಾದ ವ್ಯಕ್ತಿಯ ಕುಟುಂಬದ ಒಬ್ಬ ಸದಸ್ಯರಿಗೆ 8.25 ಲಕ್ಷ ರೂ. ಆರ್ಥಿಕ ನೆರವಿನ ಜತೆಗೆ ಸರ್ಕಾರಿ ನೌಕರಿ, ಪಿಂಚಣಿ, ಸರ್ಕಾರಿ ಜಮೀನು ನೀಡಲು ಅವಕಾಶವಿದೆ. ಹತ್ಯೆಯಾದ 163 ಜನರಲ್ಲಿ ಈವರೆಗೆ 33 ಮಂದಿ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕೊಡಿಸುವಲ್ಲಿ ಡಿಸಿಆರ್​ಇ ಯಶಸ್ವಿಯಾಗಿದೆ.

ಡಿಸಿಆರ್​ಇ ಮಾರ್ಗದರ್ಶನ: ಕೊಲೆಯಾದ ಎಸ್​ಸಿ- ಎಸ್​ಟಿ ವ್ಯಕ್ತಿಯ ಕುಟುಂಬಕ್ಕಿರುವ ಸರ್ಕಾರಿ ಸವಲತ್ತುಗಳ ಮಾಹಿತಿ ಬಹುತೇಕರಿಗೆ ಗೊತ್ತಿಲ್ಲ. ಹೀಗಾಗಿ ಇನ್ನುಮುಂದೆ ಹತ್ಯೆ ಪ್ರಕರಣ ದಾಖಲಾದ ಕೂಡಲೇ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಕುಟುಂಬಸ್ಥರಿಗೆ ಸಾಂತ್ವನ ಹೇಳುವುದರ ಜತೆಗೆ ನಿಯಮಾನುಸಾರ ಪರಿಹಾರ ಪಡೆಯಲು ಮಾರ್ಗದರ್ಶನ ನೀಡಲಿದ್ದಾರೆ.

ಏನೇನು ಸರ್ಕಾರಿ ಸವಲತ್ತು?
  • 8.25 ಲಕ್ಷ ರೂ. ಪರಿಹಾರ, ಶವಪರೀಕ್ಷೆ ನಂತರ ಶೇ.50, ಚಾರ್ಜ್​ಶೀಟ್ ಬಳಿಕ ಶೇ.50ರಂತೆ ವಿತರಣೆ
  • ಮೃತನ ಅವಲಂಬಿತರಿಗೆ ಪಿಂಚಣಿ ರೂಪದಲ್ಲಿ ಮಾಸಿಕ 5,000 ರೂ.
  • ಮಕ್ಕಳಿಗೆ ಪದವಿ ಶಿಕ್ಷಣದವರೆಗೆ ಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುವುದು
  • ಕೊಲೆ ನಂತರ 3 ತಿಂಗಳು ಅಕ್ಕಿ, ಗೋಧಿ, ಬೇಳೆಕಾಳು ಸೇರಿ ದಿನಸಿ ಒದಗಿಸುವುದು
  • ಕೃಷಿ ಭೂಮಿ ಹಾಗೂ ಒಂದು ಮನೆ ಖರೀದಿಗೆ ಬೇಕಾದ ಅವಕಾಶ ನೀಡುವುದು
ನೌಕರಿಗೆ ಏನು ಅಡ್ಡಿ?
  1. ಮೃತನ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಸಿಗುವ ಮಾಹಿತಿಯೇ ಗೊತ್ತಿರುವುದಿಲ್ಲ
  2. ಅರ್ಜಿ ಸಲ್ಲಿಸಿದರೂ ನಿಗದಿತ ನಮೂನೆಯಲ್ಲಿ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ತಿರಸ್ಕೃತ
  3. ನ್ಯಾಯಾಲಯದಲ್ಲಿ ಇನ್ನೂ ಪ್ರಕರಣ ಬಾಕಿ ಉಳಿದಿದೆ ಎಂದು ಅರ್ಜಿ ಪರಿಗಣಿಸಲ್ಲ
  4. ಮೃತ ಅಂತರ್ಜಾತಿ ವಿವಾಹವಾಗಿದ್ದರೆ ಅವಲಂಬಿತರಿಗೆ ನೌಕರಿ ಕೊಡಲ್ಲ
  5. ಒಂದು ವರ್ಷದ ಒಳಗೆ ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣಕ್ಕೂ ತಿರಸ್ಕರಿಸಲಾಗುತ್ತಿದೆ
  6. ಮೃತನು ರೌಡಿಶೀಟರ್ ಅಥವಾ ಕುಟುಂಬ ಆದಾಯ ಮಿತಿ ಹೆಚ್ಚಿದೆ ಎಂಬ ಆಕ್ಷೇಪ
ತಿದ್ದುಪಡಿ ಬೇಡಿಕೆ
  • ಕೊಲೆಯಾದ 1 ವರ್ಷದ ಒಳಗೆ ಅರ್ಜಿ ಸಲ್ಲಿಸಬೇಕು ಎಂಬ ಷರತ್ತು ಸಡಿಲಿಸಬೇಕು
  • ನಿಗದಿತ ನಮೂನೆಯಲ್ಲಿ ಪ್ರಸ್ತಾವನೆ ಸಲ್ಲಿಸಿಲ್ಲ ಎಂಬ ಸಣ್ಣ ತಪ್ಪಿಗೆ ತಿರಸ್ಕೃತ ಬೇಡ
  • ಅಂತರ್ಜಾತಿ ವಿವಾಹ ಕಾರಣಕ್ಕೆ ಆತನ ನಂಬಿದವರಿಗೆ ಸೌಲಭ್ಯ ತಿರಸ್ಕಾರ ಸರಿಯಲ್ಲ
  • ರೌಡಿ ಎಂಬ ಕಾರಣಕ್ಕೆ ಅರ್ಜಿ ತಿರಸ್ಕಾರ ಸರಿಯಲ್ಲ. ಇದರಲ್ಲಿ ಕುಟುಂಬದ ತಪ್ಪಿಲ್ಲ
ಶಿಕ್ಷೆ ಪ್ರಮಾಣ ಶೇ.4

ರಾಜ್ಯದಲ್ಲಿ 2016ರಿಂದ 2020ರವರೆಗೆ 5 ವರ್ಷದಲ್ಲಿ ಎಸ್ಸಿ-ಎಸ್ಟಿ ಸಮುದಾಯದ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 8268 ಕೇಸ್ ದಾಖಲಾಗಿವೆ. ಶಿಕ್ಷೆ ಪ್ರಮಾಣ ಶೇ.4.

ಸರ್ಕಾರಿ ಸವಲತ್ತಿನ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲ. ಎಸ್ಸಿ-ಎಸ್ಟಿ ವ್ಯಕ್ತಿಗಳ ಎಲ್ಲ ಕೊಲೆ ಪ್ರಕರಣಗಳಲ್ಲೂ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ಕೊಡಿಸಲಾಗುತ್ತದೆ. ಕೆಲವೊಮ್ಮೆ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿಂದ ಅರ್ಜಿ ತಿರಸ್ಕೃತವಾಗುತ್ತಿದೆ. ಹೀಗಾಗಿ ಕಾಯ್ದೆ ತಿದ್ದುಪಡಿಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ.| ಡಾ.ಕೆ. ರಾಮಚಂದ್ರರಾವ್ ಎಡಿಜಿಪಿ, ಡಿಸಿಆರ್​ಇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net