ದಲಿತ ಸಿಎಂ ಪ್ರಸ್ತಾಪವೇ ಸದ್ಯಕ್ಕೆ ಅಪ್ರಸ್ತುತ: ಸಚಿವ ಮುನಿಯಪ್ಪ

MUNIYAPPA KH
Published on

ಬೆಂಗಳೂರು: ದಲಿತರನ್ನು ಸಿಎಂ ಮಾಡಬೇಕು ಎಂಬ ಸ್ವಾಮೀಜಿಗಳ ಒತ್ತಾಯ ಸ್ವಾಗತಿಸುವೆ. ಅನೇಕ ವರ್ಷಗಳಿಂದ ಈ ಕೂಗಿದೆ. ಸಿಎಂ ಆಯ್ಕೆ ಪಕ್ಷದ ಶಾಸಕರು ಮತ್ತು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಸದ್ಯಕ್ಕಂತೂ ದಲಿತ ಸಿಎಂ ಪ್ರಸ್ತಾಪವೇ ಅಪ್ರಸ್ತುತ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಸಂದಭಕ್ಕೆ ಅನುಸಾರ ಕೆಲವು ತೀರ್ಮಾನಗಳಾಗಿರುತ್ತವೆ. ದಲಿತರನ್ನು ಸಿಎಂ ಮಾಡುವುದು ಪಕ್ಷದ ಹೈಕಮಾಂಡ್ ಹಾಗೂ ಶಾಸಕರ ಕೈಯ್ಯಲ್ಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಈಗ ನಮ್ಮ ಮುಂದಿರುವ ಗುರಿಯಾಗಿದೆ.

ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು 25 ವರ್ಷಗಳ ಕಾಲ ಹೈಕಮಾಂಡ್ ಜತೆಗಿದ್ದವರು. ಅವರಿಗೆ ನೋಟಿಸ್ ನೀಡಿದ್ದರ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ಸಚಿವರಾದ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಭೇಟಿ ಮಾಡಿದ್ದಾರೆ. ಸಮಸ್ಯೆಯಿದ್ದರೆ ತಾಳ್ಮೆಯಿಂದ ಅದನ್ನು ಬಗೆಹರಿಸಿಕೊಳ್ಳಬೇಕು ಎಂದ ಮುನಿಯಪ್ಪ, ಸಚಿವ ಡಿ.ಸುಧಾಕರ್ ಪ್ರಕರಣಕ್ಕೆ ಹೆಚ್ಚು ಪ್ರಚಾರ ನೀಡಬೇಕಾದ ಅಗತ್ಯವೇನಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net