

ಮಾತಿಗೆ ಕಟ್ಟುವ ಶಕ್ತಿಯೂ ಇದೆ; ಕೆಡಹುವ ಶಕ್ತಿಯೂ ಇದೆ. ಮಾತು ಶಾಂತಿಯನ್ನೂ ತರಬಲ್ಲದು; ಅಶಾಂತಿಯನ್ನೂ ಉಂಟುಮಾಡಬಲ್ಲದು ಎಂಬುದಕ್ಕೆ ಇತಿಹಾಸ ಮತ್ತು ವರ್ತಮಾನದಲ್ಲಿ ಹೇರಳ ನಿದರ್ಶನಗಳು ಸಿಗುತ್ತವೆ. ಆಯಾ ಸನ್ನಿವೇಶ, ಸಂದರ್ಭ ನೋಡಿ ಮಾತಾಡುವುದು ಒಂದು ಕಲೆ. ಅದರಲ್ಲೂ ವಿಶೇಷವಾಗಿ ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಭಾಷಣ ಮಾಡುವಾಗ, ಹೇಳಿಕೆ ನೀಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ನಮ್ಮ ಸಂವಿಧಾನದ 19ನೇ ವಿಧಿಯು ಎಲ್ಲರಿಗೂ ವಾಕ್ ಸ್ವಾತಂತ್ರ್ಯವನ್ನು ನೀಡಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಉಬ್ಬರ ಇರುವ ಇಂದಿನ ದಿನಮಾನದಲ್ಲಿ ಜನರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಬೇಕಾದಷ್ಟು ವೇದಿಕೆಗಳು ಲಭ್ಯ ಇರುವುದರಿಂದ ಸಲಹೆಸೂಚನೆ, ಅನಿಸಿಕೆ, ಟೀಕೆಗಳು ಓತಪ್ರೋತವಾಗಿ ಹರಿದುಬರುತ್ತವೆ.
ಸಂವಿಧಾನವು ಸ್ವಾತಂತ್ರ್ಯ ನೀಡುವಂತೆ ಕರ್ತವ್ಯವನ್ನೂ ನಿಗದಿಪಡಿಸುತ್ತದೆ. ಹಾಗೆನೋಡಿದರೆ, ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳು. ಒಂದಕ್ಕೊಂದು ಪೂರಕ. ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ, ಸವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠವೊಂದು ವ್ಯಕ್ತಪಡಿಸಿದ ಅನಿಸಿಕೆಗಳು ಈ ನಿಟ್ಟಿನಲ್ಲಿ ಗಮನಾರ್ಹ. 2016ರಲ್ಲಿ ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಾಯಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಕುರಿತು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ, ‘ಇದು ನಮ್ಮ ಕುಟುಂಬದ ಪ್ರತಿಷ್ಠೆ ಮತ್ತು ನ್ಯಾಯಯುತ ವಿಚಾರಣೆಯ ನಿರೀಕ್ಷೆ ತಗ್ಗಿಸಿದೆ’ ಎಂದು ಬಾಲಕಿ ತಂದೆ ದೂರಿದ್ದರು. ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯಕ್ಕೆ ಮಿತಿ ಇರಬೇಕು ಎಂದು ಅವರು ವಾದಿಸಿದ ಹಿನ್ನೆಲೆಯಲ್ಲಿ ಈ ಕುರಿತ ಹಲವು ಪ್ರಶ್ನೆಗಳ ಬಗ್ಗೆ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿತು. ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ಸದಸ್ಯರಲ್ಲೊಬ್ಬರಾ ನ್ಯಾ. ನಾಗರತ್ನ ಅವರು, ‘ನುಡಿದರೆ ಮುತ್ತಿನ ಹಾರದಂತಿರಬೇಕು...’ ಎಂಬ ಬಸವಣ್ಣನ ಪ್ರಸಿದ್ಧ ವಚನವನ್ನು ತೀರ್ಪಿನಲ್ಲಿ ಉಲ್ಲೇಖಿಸಿರುವುದು ವಿಶೇಷ.
‘ದ್ವೇಷದ ಮಾತುಗಳು ಸಂವಿಧಾನದ ಮೂಲಮೌಲ್ಯಗಳಿಗೆ ಧಕ್ಕೆ ಮಾಡುತ್ತವೆ ಮತ್ತು ಸಾಮಾಜಿಕ ಅಸಮಾನತೆಗೆ ಕಾರಣವಾಗುತ್ತವೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಅತ್ಯಗತ್ಯ ಹಕ್ಕು. ಭಾಷಣ, ಮಾತುಗಳ ಮೂಲಕ ದೇಶದ ಜನರಿಗೆ ಆಡಳಿತದ ಬಗ್ಗೆ ಉತ್ತಮ ತಿಳಿವಳಿಕೆ, ಮಾಹಿತಿ ನೀಡಬೇಕೆ ಹೊರತು, ಅದು ದ್ವೇಷದ ಭಾಷಣವಾಗಬಾರದು. ಭಾಷಣ ಅಥವಾ ಹೇಳಿಕೆ ನೀಡುವಾಗ ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿರುವವರು ಬಹಳ ಎಚ್ಚರಿಕೆ ವಹಿಸಬೇಕು’ ಎಂದು ನ್ಯಾ.ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆಗಳು ಹತ್ತಿರವಾದಾಗಲಂತೂ ರಾಜಕೀಯ ನಾಯಕರ ಮಾತುಗಳು ಪ್ರವಾಹದಂತೆ ಹರಿಯುತ್ತವೆ. ಅದಕ್ಕೆ ಲಂಗುಲಗಾಮು ಇರುವುದು ಕಡಿಮೆ. ಇಂಥ ಎಷ್ಟೋ ಹೇಳಿಕೆ, ಭಾಷಣಗಳಿಂದಾಗಿ ಅಹಿತಕರ ವಾತಾವರಣ ನಿರ್ವಣವಾದ ಉದಾಹರಣೆಗಳು ಸಹ ಬೇಕಾದಷ್ಟಿವೆ. ಅಂಥ ಮಾತಿನ ಪರಿಣಾಮ ವ್ಯಕ್ತವಾದ ಮೇಲೆ ‘ಹಾಗೆ ಹೇಳಿಲ್ಲ’ ‘ನನ್ನ ಹೇಳಿಕೆ ತಿರುಚಲಾಗಿದೆ’ಎಂಬೆಲ್ಲ ಸಮಜಾಯಿಷಿಗಳಿಂದ ಪ್ರಯೋಜನವಿಲ್ಲ. ಅಬ್ಬರ ಉಬ್ಬರ ಇಲ್ಲದ ಸಂಯಮದ ಮಾತುಗಳಿಂದಲೂ ಜನರನ್ನು ಸೆಳೆಯಬಹುದು ಎಂಬುದನ್ನು ಸಾರ್ವಜನಿಕ ಬದುಕಿನಲ್ಲಿರುವ ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕಾದುದು ಇಂದಿನ ಅಗತ್ಯ.