

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮಾದರಿಯಲ್ಲಿ ರಾಜ್ಯದ 7 ಇಂಜಿನಿಯರಿಂಗ್ ಕಾಲೇಜುಗಳನ್ನು ಕೆಐಟಿಗಳಾಗಿ ಅಭಿವೃದ್ಧಿಪಡಿಸುವುದಾಗಿ ಕಳೆದ ಬಜೆಟ್ನಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದು, ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಅನೇಕ ಬೆಳವಣಿಗೆಗಳು ನಡೆದಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಐಐಟಿಗಳು ದೇಶದ ಅಗ್ರಗಣ್ಯ ಶೈಕ್ಷಣಿಕ ಸಂಸ್ಥೆಗಳಾಗಿದ್ದು, ಜಾಗತಿಕವಾಗಿಯೂ ಮನ್ನಣೆ ಗಳಿಸಿವೆ. 1950ರಲ್ಲಿ ಐಐಟಿ ಸ್ಥಾಪಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡು, 1951ರಲ್ಲಿ ಪಶ್ಚಿಮ ಬಂಗಾಳದ ಖರಗಪುರದಲ್ಲಿ ಮೊದಲ ಐಐಟಿ ಸ್ಥಾಪನೆಗೊಂಡಿತು. ಪ್ರಸ್ತುತ ದೇಶದ ವಿವಿಧೆಡೆ 23 ಐಐಟಿಗಳು ತಲೆಎತ್ತಿದ್ದು, ಈ ಪೈಕಿ ಕರ್ನಾಟಕದಲ್ಲಿ ಎರಡು ಇವೆ.
2016ರ ಜುಲೈನಲ್ಲಿ ಧಾರವಾಡದಲ್ಲಿ ರಾಜ್ಯದ ಪ್ರಥಮ ಐಐಟಿ ಸ್ಥಾಪನೆಗೊಂಡಿತು. 2019ರ ಆಗಸ್ಟ್ನಲ್ಲಿ ರಾಯಚೂರಿನಲ್ಲಿ ರಾಜ್ಯದ ಎರಡನೇ ಐಐಟಿ ಅಸ್ತಿತ್ವಕ್ಕೆ ಬಂದಿತು. ಈ ಸಂಸ್ಥೆಗಳಲ್ಲಿ ಕಲಿಯಬೇಕೆಂಬುದು ದೇಶದ ಬಹುತೇಕ ಪ್ರತಿಭಾವಂತ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಐಐಟಿಗಳ ಪ್ರವೇಶಕ್ಕಾಗಿ ತೀವ್ರ ಪೈಪೋಟಿ ಇದ್ದು, ಇದಕ್ಕಾಗಿ ದೇಶವ್ಯಾಪಿಯಾಗಿ ಪ್ರವೇಶ ಪರೀಕ್ಷೆಗಳು ನಡೆಯುತ್ತವೆ. ಇಲ್ಲಿ ಕಲಿತವರಿಗೆ ದೇಶ- ವಿದೇಶಗಳ ಕೈಗಾರಿಕೋದ್ಯಮಗಳಲ್ಲಿ ಅಪಾರ ಬೇಡಿಕೆ ಇದ್ದು, ಉತ್ತಮ ಸಂಬಳವೂ ದೊರಕುತ್ತದೆ. ಇದಕ್ಕೆ ಬಹುಮುಖ್ಯ ಕಾರಣ ಇಲ್ಲಿರುವ ಕಲಿಕಾ ಗುಣಮಟ್ಟ. ಹೊರಜಗತ್ತಿನ ಸ್ಪರ್ಧೆ ಎದುರಿಸಲು ಹಾಗೂ ಕೈಗಾರಿಕೋದ್ಯಮ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಪ್ರಾಯೋಗಿಕ ಕಲಿಕೆಗೆ ಇಲ್ಲಿ ಒತ್ತು ನೀಡಲಾಗುತ್ತದೆ. ಐಐಟಿಗಳಿಗೆ ಇರುವ ಬೇಡಿಕೆ ಗಮನಿಸಿ ರಾಜ್ಯ ಸರ್ಕಾರವು ರಾಜ್ಯದ 7 ಇಂಜಿನಿಯರಿಂಗ್ ಕಾಲೇಜುಗಳನ್ನು ಅದೇ ಮಾದರಿಯಲ್ಲಿ ಕೆಐಟಿಯಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಿ, 2022-23 ನೇ ಸಾಲಿನ ಬಜೆಟ್ನಲ್ಲಿ ಘೊಷಿಸಿದೆ. ಕಲಬುರಗಿ, ಹಾವೇರಿ, ಉತ್ತರ ಕನ್ನಡ, ಕೆ. ಆರ್. ಪೇಟೆ, ಕೊಡಗು, ಬೆಂಗಳೂರು ಹಾಗೂ ರಾಮನಗರದಲ್ಲಿನ ಇಂಜಿನಿಯರಿಂಗ್ ಕಾಲೇಜುಗಳನ್ನು ಕೆಐಟಿಗಳಾಗಿ ಮೇಲ್ದರ್ಜೆಗೇರಿಸಲು ಆಯ್ಕೆ ಮಾಡಲಾಗಿದೆ.
ಕೆಐಟಿ ಸ್ಥಾಪನೆ ಕುರಿತಂತೆ ಮೇ ತಿಂಗಳಲ್ಲಿ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಪಡೆ ರಚಿಸಲು ಸೂಚಿಸಿದ್ದರು. ಎನ್ಐಟಿ, ಐಐಟಿಗಳ ನಿವೃತ್ತ ನಿರ್ದೇಶಕರು, ಶಿಕ್ಷಣ ತಜ್ಞರು ಒಳಗೊಂಡಿರುವ ಸಮಿತಿ ರಚಿಸುವಂತೆ ಮತು ಕೆಐಟಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಪ್ರಮುಖ ಐಟಿ ಕಂಪನಿಗಳು, ಕೈಗಾರಿಕೋದ್ಯಮಿಗಳ ಸೇವೆ ಪಡೆಯಲು ಸಲಹೆ ಕೊಟ್ಟಿದ್ದರು. ಈ ಸಲಹೆ ಸಹ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳ ಓದಿಗೆ ಸೀಮಿತಗೊಳ್ಳದೆ, ಹೊರಜಗತ್ತಿನ ಸ್ಪರ್ಧಾ ಪ್ರಪಂಚವನ್ನು ಎದುರಿಸಲು ಅಗತ್ಯವಿರುವ ಪ್ರಾಯೋಗಿಕ ಜ್ಞಾನ ಸಿಗಬೇಕು. ಕೌಶಲಭರಿತ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂಬುದು ಎಷ್ಟೋ ಉದ್ಯಮಿಗಳ ದೂರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಪ್ರಥಮವಾಗಿ ಜಾರಿಗೊಳಿಸಿದ ಶ್ರೇಯಕ್ಕೆ ಕರ್ನಾಟಕ ಪಾತ್ರವಾಗಿದ್ದು, ನೂತನ ನೀತಿಯಲ್ಲಿ ಪ್ರಾಪಂಚಿಕ ಮಾರುಕಟ್ಟೆಯ ಬೇಡಿಕೆ ಹಾಗೂ ಸವಾಲುಗಳನ್ನು ನಿಭಾಯಿಸುವ ರೀತಿಯಲ್ಲಿ ಪ್ರಾಯೋಗಿಕ ಕಲಿಕೆ ಒತ್ತು ನೀಡಲು ಉದ್ದೇಶಿಸಲಾಗಿದೆ ಎಂಬುದು ಸಂಬಂಧಪಟ್ಟವರ ಅಂಬೋಣ. ಕೆಐಟಿಗಳು ಐಐಟಿಗಳಂತೆ ಯಶಸ್ಸು ಮತ್ತು ಬೇಡಿಕೆ ಗಳಿಸಿಕೊಳ್ಳಬೇಕಾದರೆ ಆ ದಿಕ್ಕಿನಲ್ಲಿ ಕ್ರಮಿಸಬೇಕಾದ ಹಾದಿ ದೀರ್ಘವಾಗಿದೆ ಮತ್ತು ಸವಾಲಿನಿಂದ ಕೂಡಿದೆ.