ಸಂಪಾದಕೀಯ | ಯುವಶಕ್ತಿಗೆ ಬಲ; ಬೃಹತ್ ಯೋಜನೆಗೆ 23ರಂದು ಚಾಲನೆ

Youth
Published on

ರಾಜ್ಯ ಸರ್ಕಾರವು ಮಾರ್ಚ್ 23ರಂದು ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಗೆ ಚಾಲನೆ ನೀಡಲಿದೆ. ಯುವಜನರಿಗೆ ವಿವಿಧ ಅವಕಾಶಗಳನ್ನು ಒದಗಿಸಿ, ಪ್ರತಿಭೆ ವಿಕಸನಕ್ಕೆ ವೇದಿಕೆ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ಭಾನುವಾರ ಸಭೆ ನಡೆಸಿ ಸಂಘಗಳ ರಚನೆಯ ಪ್ರಗತಿಯ ಕುರಿತು ಮಾಹಿತಿ ಪಡೆದರು.

ರಾಜ್ಯದಲ್ಲಿ ಒಟ್ಟು 5951 ಗ್ರಾಮ ಪಂಚಾಯತಿಗಳಿದ್ದು, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ ಎರಡು ಜಂಟಿ ಬಾಧ್ಯತಾ ಗುಂಪುಗಳನ್ನು ರಚಿಸಲು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಈವರೆಗೆ ಸುಮಾರು 6509 ಜಂಟಿ ಬಾಧ್ಯತಾ ಗುಂಪುಗಳು ರಚನೆಯಾಗಿವೆ. ಇನ್ನೂ 5393 ಗುಂಪುಗಳು ರಚನೆಯಾಗಬೇಕಾಗಿದೆ. ಇಂಥ ಪ್ರತಿ ಸಂಘಕ್ಕೆ ತಲಾ 10 ಸಾವಿರ ರೂ. ಸುತ್ತು ನಿಧಿಯನ್ನು ಸರ್ಕಾರ ನೀಡಲಿದೆ. ಯುವಜನರಿಗೆ ಸ್ವಉದ್ಯೋಗ ಕೈಗೊಳ್ಳಲು ನೆರವು ಮತ್ತು ಉತ್ತೇಜನ ನೀಡುವ ಮಹತ್ವದ ಅಂಶವೂ ಇದರಲ್ಲಿದೆ. ಪ್ರತಿ ಸಂಘಕ್ಕೆ 5 ಲಕ್ಷ ರೂ. ಸಾಲ ಮಿತಿ ನಿಗದಿಪಡಿಸಲಾಗಿದೆ.

ಒಂದೊಮ್ಮೆ ಸಂಘವು ಮಂಡಿಸಿದ ಯೋಜನೆಯ ಮೊತ್ತ ಹೆಚ್ಚಿದ್ದು, ಲಾಭದಾಯಕ ಯೋಜನೆ ಎಂದು ಮನದಟ್ಟಾದರೆ ಈ ಮಿತಿಯನ್ನು ಮೀರಿ ಸಾಲ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳು ಬ್ಯಾಂಕುಗಳಿಗೆ ಸಲಹೆ ನೀಡಿದ್ದಾರೆ. ನಮ್ಮಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಅನೇಕ ವರ್ಷಗಳಿಂದ ಸಕ್ರಿಯವಾಗಿದ್ದು, ಗಮನಾರ್ಹ ಕಾರ್ಯನಿರ್ವಹಣೆ ಮಾಡುತ್ತಿವೆ. ಆದರೆ ಯುವಕರಿಗಾಗಿ ಮೊದಲ ಬಾರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಈ ಮೂಲಕ ಯೋಜನೆ ರೂಪಿಸಲಾಗಿದೆ.

‘ಜಂಟಿ ಬಾಧ್ಯತಾ ಗುಂಪುಗಳ ರಚನೆ ಮಾಡಿ ಸುತ್ತು ನಿಧಿ ಹಂಚಿಕೆ ಮಾಡಿದರೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಈ ಗುಂಪುಗಳು ಯೋಜನೆಯನ್ನು ಗುರುತಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು ಉದ್ದಿಮೆ ಸ್ಥಾಪಿಸಿ ಉತ್ಪಾದನೆ ಪ್ರಾರಂಭಿಸುವವರೆಗೂ ಮಾರ್ಗದರ್ಶನ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸಿಎಂ ಸೂಚಿಸಿದ್ದಾರೆ. ಈ ಮೂಲಕ ಅಧಿಕಾರಿಗಳ ಜವಾಬ್ದಾರಿಯನ್ನೂ ನೆನಪಿಸಿದ್ದಾರೆ. ನಮ್ಮಲ್ಲಿ ಯುವಜನರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಆದರೆ ವಿದ್ಯೆ ಅಥವಾ ಅರ್ಹತೆಗೆ ತಕ್ಕಂತೆ ಎಲ್ಲರಿಗೂ ಉದ್ಯೋಗ ದೊರೆಯುವುದು ಕಷ್ಟಸಾಧ್ಯ. ಅದರಲ್ಲೂ ಸರ್ಕಾರಿ ಹುದ್ದೆಗಳ ನೇಮಕಾತಿ ನಡೆಯುವುದು ತಗ್ಗಿದೆ. ಹೀಗಾಗಿ ಸರ್ಕಾರಿ ಉದ್ಯೋಗ ಎಲ್ಲೋ ಕೆಲವು ಮಂದಿಗೆ ಮಾತ್ರ ಎಂಬಂತಾಗಿದೆ.

ಇನ್ನು, ಖಾಸಗಿ ವಲಯದ ಬೃಹತ್ ಕೈಗಾರಿಕೆಗಳು ಬಂದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳು ದೊರಕಬಹುದು ಮತ್ತು ಪರೋಕ್ಷ ಉದ್ಯೋಗಗಳೂ ಸೃಷ್ಟಿಯಾಗುವ ಸಾಧ್ಯತೆಗಳು ಇರುತ್ತವೆ. ಆದರೆ, ಭೂಮಿ, ನೀರು, ವಿದ್ಯುತ್ ಇತ್ಯಾದಿ ಲಭ್ಯತೆ ಹಾಗೂ ಉದ್ಯಮಿಗಳ ವಾಣಿಜ್ಯಕ ದೃಷ್ಟಿಕೋನದ ಮೇಲೆ ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ. ಇದರ ಹೊರತಾಗಿ ನೋಡಿದರೆ, ಸ್ವಯಂ ಉದ್ಯೋಗ ವಲಯದಲ್ಲಿ ಯುವಜನರಿಗೆ ಅವಕಾಶಗಳು ದೊರೆಯಬಲ್ಲದು. ಸ್ವ ಉದ್ಯೋಗಕ್ಕೆ ಸೂಕ್ತವಾದ ವಾತಾವರಣ ಹಾಗೂ ಸವಲತ್ತುಗಳನ್ನು ಕಲ್ಪಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಈಗ ಅಸ್ತಿತ್ವಕ್ಕೆ ಬರುತ್ತಿರುವ ಯುವಜನ ಸಂಘಗಳ ಮೇಲೆ ನಿರೀಕ್ಷೆಯಿದ್ದು, ಇವನ್ನು ರಚನಾತ್ಮಕವಾಗಿ ಬೆಳೆಸುವ ಹೊಣೆಗಾರಿಕೆ ಸಮಾಜ ಮತ್ತು ಸರ್ಕಾರದ ಮೇಲೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net