ಸಂಪಾದಕೀಯ | ಆಗಸ ಸಾಹಸ; ರಕ್ಷಣೆ, ವಾಯುಯಾನದಲ್ಲಿ ಭರವಸೆಯ ನೆಗೆತ

113465
Published on

ರಕ್ಷಣೆ ಮತ್ತು ಬಾಹ್ಯಾಕಾಶ ರಂಗದಲ್ಲಿ ಭಾರತದ ಪ್ರಗತಿ, ಶಕ್ತಿಯನ್ನು ವಿಶ್ವದೆದುರು ಅನಾವರಣಗೊಳಿಸುವ ಪ್ರತಿಷ್ಠಿತ ವೇದಿಕೆಯಾದ ಏರೋ ಇಂಡಿಯಾ ಮೇಳ ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಇಂದು ಸಂಪನ್ನಗೊಳ್ಳಲಿದೆ. ಇನ್ನೊಂದೆಡೆ, ನಾಗರಿಕ ವಿಮಾನಯಾನ ರಂಗದಲ್ಲಿ ಖಾಸಗಿ ವಲಯದಲ್ಲಿ ದೊಡ್ಡ ಬೆಳವಣಿಗೆ ನಡೆಯುತ್ತಿದ್ದು, ಏರ್ ಇಂಡಿಯಾ ಸಂಸ್ಥೆಯು ಒಟ್ಟಾರೆಯಾಗಿ 870 ವಿಮಾನಗಳಿಗೆ ಬೇಡಿಕೆ ಸಲ್ಲಿಸುವತ್ತ ಮುಂದಡಿ ಇಟ್ಟಿದೆ. ಈ ಎರಡೂ ಸಂಗತಿಗಳು ​ಪ್ರತ್ಯೇಕವಾಗಿದ್ದರೂ, ಆಗಸದಲ್ಲಿ ಭಾರತದ ಹಿರಿಮೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿವೆ ಎಂದು ಹೇಳಬಹುದು.

ಏರೋ ಇಂಡಿಯಾ ವಿಷಯಕ್ಕೆ ಬರುವುದಾದರೆ, 90ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಭಾಗವಹಿಸಿ ವಿಚಾರ ವಿನಿಮಯ ನಡೆಸಿದರು. ರಕ್ಷಣೆ ಮತ್ತು ಬಾಹ್ಯಾಕಾಶ ರಂಗದಲ್ಲಿನ ತಂತಮ್ಮ ಸಾಧನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ವಿವಿಧ ಯುದ್ಧವಿಮಾನಗಳು ಹಾಗೂ ಹೆಲಿಕಾಪ್ಟರ್​ಗಳು ಆಗಸದಲ್ಲಿ ಸಾಹಸ ಪ್ರದರ್ಶಿಸಿ ನೋಡುಗರಲ್ಲಿ ಅಚ್ಚರಿ ಮೂಡಿಸಿದವು. ಅಲ್ಲದೆ, ಈ ಕ್ಷೇತ್ರದಲ್ಲಿನ ಈಚಿನ ಸಂಶೋಧನೆಗಳು ಮತ್ತು ಬೆಳವಣಿಗೆಗಳ ಬಗ್ಗೆ ಮೇಳದಲ್ಲಿ ವಿವರ ಲಭಿಸಿತು. ಇನ್ನು, ಭಾರತದ ದೃಷ್ಟಿಯಿಂದ ಹೇಳುವುದಾದರೆ, ರಕ್ಷಣಾ ವಲಯವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಹಲವು ಪ್ರಮುಖ ಜಾಗತಿಕ ಕಂಪನಿಗಳ ಜತೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ರೀತಿ ಮಾಡಿಕೊಂಡ ಒಪ್ಪಂದಗಳ ಮೊತ್ತ ಸುಮಾರು 80 ಸಾವಿರ ಕೋಟಿ ರೂ.ಗಳು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ. ಹೀಗಾಗಿ ವ್ಯಾವಹಾರಿಕವಾಗಿಯೂ ಇದು ಲಾಭತಂದುಕೊಟ್ಟಿತೆನ್ನಬಹುದು.

ರಕ್ಷಣಾ ಸಾಮಗ್ರಿಗಳ ವಿಷಯದಲ್ಲಿ ಭಾರತನ್ನು ಸ್ವಾವಲಂಬಿಯಾಗಿಸುವ ಮಹತ್ವಾಕಾಂಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ಈ ದಿಸೆಯಲ್ಲಿ ಆದ ಕೆಲ ಪ್ರಗತಿಯನ್ನೂ ಈ ಮೇಳದಲ್ಲಿ ಪ್ರದರ್ಶಿಸಲಾಯಿತು. ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡು ತಯಾರಾಗುತ್ತಿರುವ ಅನೇಕ ಸಾಧನಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ನಾಗರಿಕ ವಿಮಾನಯಾನ ರಂಗದಲ್ಲಿ ಖಾಸಗಿ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುತೂಹಲ ಮೂಡಿಸುವಂತಿದೆ.

ಸರ್ಕಾರದ ಅಧೀನದಲ್ಲಿದ್ದ ಏರ್ ಇಂಡಿಯಾವನ್ನು ಸ್ವಾಧೀನಕ್ಕೆ ತೆಗೆದುಕೊಂಡಿರುವ ಟಾಟಾ ಸಮೂಹ, ದಾಪುಗಾಲು ಇಡಲು ಮುಂದಾಗಿದೆ. ಬೋಯಿಂಗ್ ಮತ್ತು ಏರ್​ಬಸ್ ಕಂಪನಿಗಳಿಂದ ಒಟ್ಟು 470 ವಿಮಾನಗಳ ಖರೀದಿಗೆ ಆರ್ಡರ್ ನೀಡಿದ್ದು, ಇನ್ನೂ 370 ವಿಮಾನಗಳನ್ನು ಖರೀದಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಈ ಬೃಹತ್ ಖರೀದಿ ಪ್ರಕ್ರಿಯೆ ಭಾರತ ಮಾತ್ರವಲ್ಲದೆ, ವಿಮಾನಯಾನ ಕಂಪನಿಗಳಿರುವ ಅಮೆರಿಕ ಹಾಗೂ ಫ್ರಾನ್ಸ್​ಗಳಲ್ಲಿ ಕೂಡ ಆರ್ಥಿಕ ಚಟುವಟಿಕೆ ಉಂಟುಮಾಡುವುದಲ್ಲದೆ, ದೊಡ್ಡ ಪ್ರಮಾಣದ ಉದ್ಯೋಗಸೃಷ್ಟಿಗೂ ಕಾರಣವಾಗಲಿದೆ. ಇದಲ್ಲದೆ ಇನ್ನೂ ಮೂರ್ನಾಲ್ಕು ವಿಮಾನಯಾನ ಕಂಪನಿಗಳು ಹೊಸ ವಿಮಾನ ಖರೀದಿಗೆ ಆಸಕ್ತವಾಗಿವೆ.

ಭಾರತದ ನಾಗರಿಕ ವಿಮಾನಯಾನ ರಂಗ ಈಗ ಸ್ಥಿತ್ಯಂತರದ ಸ್ಥಿತಿಯಲ್ಲಿದ್ದು, ಅನೇಕ ಸವಾಲುಗಳನ್ನೂ ಎದುರಿಸುತ್ತಿದೆ. ಜನಸಾಮಾನ್ಯರಿಗೂ ವಿಮಾನಯಾನ ಸಾಧ್ಯವಾಗಬೇಕು ಮತ್ತು ಸ್ಥಳೀಯ ಸಂಪರ್ಕ ವ್ಯವಸ್ಥೆ ಸುಧಾರಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ‘ಉಡಾನ್’ ಯೋಜನೆಯನ್ನು ಜಾರಿಗೊಳಿಸಿದೆ. ಅತ್ತ, ಖಾಸಗಿ ಕಂಪನಿಗಳು ವಿಮಾನಯಾನದಲ್ಲಿ ಹೊಸ ಸಾಹಸಕ್ಕೆ ಮುಂದಾಗಿವೆ. ಒಟ್ಟಿನಲ್ಲಿ, ಆಗಸದಲ್ಲಿ ಭಾರತದ ಹೆಜ್ಜೆಗುರುತು ಇನ್ನಷ್ಟು ಹೆಚ್ಚಲು ಸಹಾಯಕವಾದ ಸಂಗತಿಗಳಿವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net