

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ದೀಪಾವಳಿ ಉಡುಗೊರೆ ನೀಡಿದೆ. ಶೇ. 3 ತುಟ್ಟಿಭತ್ಯೆ (ಡಿಎ) ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ. ಇದು ಜುಲೈ 1ರಿಂದ ಅನ್ವಯ ಆಗಲಿದ್ದು, ಡಿಎ ಪ್ರಮಾಣ ಶೇ. 28ರಿಂದ ಶೇ. 31ಕ್ಕೆ ಏರಿಕೆ ಆಗಲಿದೆ. ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರ (ಡಿಆರ್) ದೊರೆಯಲಿದೆ. 7ನೇ ವೇತನ ಆಯೋಗದ ಶಿಫಾರಸಿಗೆ ಅನುಗುಣವಾಗಿ ಈ ಏರಿಕೆ ಮಾಡಲಾಗಿದೆ. ಈ ನಿರ್ಧಾರದಿಂದ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಆರ್ಥಿಕ ಅನುಕೂಲ ದೊರೆಯಲಿದೆ. ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 9,488.70 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ.
ಗತಿಶಕ್ತಿಗೆ ಸಮ್ಮತಿ: ಪ್ರಧಾನಿ ನರೇಂದ್ರ ಮೋದಿ ಅ. 13ರಂದು ಚಾಲನೆ ನೀಡಿದ ನೂರು ಲಕ್ಷ ಕೋಟಿ ರೂಪಾಯಿ ಅನುದಾನ ಮೊತ್ತದ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾ್ಯನ್ಗೆ (ಎನ್ಎಂಪಿ) ಸಂಪುಟ ಒಪ್ಪಿಗೆ ನೀಡಿದೆ. ಸಾರಿಗೆ ವ್ಯವಸ್ಥೆಯಲ್ಲಿನ ಅಡಚಣೆ ನಿವಾರಿಸಲು ವಿವಿಧ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ಯೋಜನೆ ಇದಾಗಿದ್ದು, ಇದರಿಂದ ಸರಕು ಸಾಗಣೆ ತಡೆರಹಿತವಾಗಲಿದೆ. ಎನ್ಎಂಪಿ ಮೇಲೆ ಮೂರು ಹಂತದಲ್ಲಿ ನಿಗಾ ಇರಲಿದ್ದು, ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯ ಉನ್ನತಾಧಿಕಾರದ ಕಾರ್ಯದರ್ಶಿಗಳ ಗುಂಪು (ಇಜಿಒಎಸ್), ಮಲ್ಟಿಮಾಡಲ್ ನೆಟ್ವರ್ಕ್ ಪ್ಲಾ್ಯನಿಂಗ್ ಗುಂಪು (ಎನ್ಪಿಜಿ), ತಾಂತ್ರಿಕ ಬೆಂಬಲ ಘಟಕ (ಟಿಎಸ್ಯುು) ಈ ಹೊಣೆಯನ್ನು ನಿರ್ವಹಿಸಲಿವೆ.