

ಬೆಂಗಳೂರು: ಸಿಬಿಐ ಅಧಿಕಾರಿಗಳು ದಾಖಲಿಸಿ ಕೊಂಡಿರುವ ಎಫ್ಐಆರ್ನಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ. ಡಿಕೆಶಿ ಆಸ್ತಿ ಕೇವಲ 2013-18ರ 5 ವರ್ಷದ ಅವಧಿಯಲ್ಲಿ ಶೇ.380 ಹೆಚ್ಚಳವಾಗಿರುವುದು ಎಫ್ಐಆರ್ನಿಂದ ತಿಳಿದುಬಂದಿದ್ದು, ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
2013ರ ಏ.13ರಂದು ಚುನಾವಣೆ ಅಫಿಡವಿಟ್ ಸಲ್ಲಿಸುವ ವೇಳೆ 33.92 ಕೋಟಿ ರೂ. ಇದ್ದ ಆಸ್ತಿಯು 2018 ಏ.30ಕ್ಕೆ 162.53 ಕೋಟಿ ರೂ.ಗೆ ಹೆಚ್ಚಳವಾಗಿದೆ. 2013-18ರ 5 ವರ್ಷದ ಅವಧಿಯಲ್ಲಿ ಒಟ್ಟು 128.60 ಕೋಟಿ ರೂ. ಆಸ್ತಿ ಪ್ರಮಾಣ ಹೆಚ್ಚಿದೆ. ಈ ಅವಧಿಯಲ್ಲಿ 166.79 ಕೋಟಿ ರೂ. ಆದಾಯ ಹೊಂದಿದ್ದು, 113.12 ಕೋಟಿ ರೂ. ಖರ್ಚು ಮಾಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ. ಘೋಷಿತ ಆದಾಯಕ್ಕಿಂತ 74.93 ಕೋಟಿ ರೂ. ಹೆಚ್ಚಿನ ಆದಾಯ ಹೊಂದಿರುವುದು ಪತ್ತೆಯಾಗಿದೆ. ಶೇ.44.93 ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವುದು ಕಂಡು ಬಂದಿದೆ ಎಂದು ಸಿಬಿಐ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. 2013ರ ಏ.13ರಿಂದ 2018ಏ.30ರ ವರೆಗಿನ ಅವಧಿಯಲ್ಲಿ ಡಿಕೆಶಿ ಹೊಂದಿರುವ ಅಕ್ರಮ ಆಸ್ತಿ ಬಗ್ಗೆ ಮಾತ್ರ ಸಿಬಿಐ ತನಿಖೆ ನಡೆಸುತ್ತಿದೆ. ಈ ಅವಧಿಗೂ ಹಿಂದೆ ಹಾಗೂ ಅವಧಿ ನಂತರ ಅವರ ವ್ಯವಹಾರದ ಬಗ್ಗೆ ಎಫ್ಐಆರ್ನಲ್ಲಿ ಮಾಹಿತಿ ಉಲ್ಲೇಖಿಸಿಲ್ಲ.
ಡಿಕೆಶಿ ಹೆಸರು ಮಾತ್ರ ಉಲ್ಲೇಖ: ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಹಾಗೂ ಅವರ ಆಪ್ತರ ಮೇಲೆ ಸಿಬಿಐ ದಾಳಿ ನಡೆಸಿದ್ದರೂ, ಆರೋಪಿ ಸ್ಥಾನದಲ್ಲಿ ಶಿವಕುಮಾರ್ ಒಬ್ಬರ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ. ಎಫ್ಐಆರ್ನಲ್ಲಿ ಎಲ್ಲೂ ಸುರೇಶ್ ಹೆಸರು ಉಲ್ಲೇಖಲಾಗಿಲ್ಲ. ಆದರೆ, ಡಿಕೆಶಿಗೆ ಅಕ್ರಮ ಹಣ ಸಂಪಾದಿಸಲು ಸಹಕರಿಸಿದ ಇವರ ಆಪ್ತರಾದ ಆಂಜನೇಯ ಹನುಮಂತಯ್ಯ, ಶಶಿಕುಮಾರ್ ಬಗ್ಗೆಯೂ ಎಫ್ಐಆರ್ನಲ್ಲಿ ಸಿಬಿಐ ತಿಳಿಸಿದೆ.
ಮಂತ್ರಿಯಾಗಿದ್ದು ಯಾವಾಗ?: 2013ರ ಏ.1ರಿಂದ 2018ರವರೆಗೆ ಡಿ.ಕೆ.ಶಿವಕುಮಾರ್ ಸಚಿವರಾಗಿದ್ದಾಗ ಆಸ್ತಿ ಹೆಚ್ಚಳವಾಗಿದೆ ಎಂದು ಎಫ್ಐಆರ್ನಲ್ಲಿ ನಮೂದಾಗಿದೆ. ಆದರೆ 2013ರಲ್ಲಿ ಬಿಜೆಪಿ ಸರ್ಕಾರವಿತ್ತು. 2014ರಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂತಾದರೂ ಪ್ರಾರಂಭದಲ್ಲಿ ಡಿಕೆಶಿ ಸಚಿವರಾಗಿರಲಿಲ್ಲ. 2014ರ ಮಧ್ಯಭಾಗದಲ್ಲಿ ಸಚಿವರಾಗಿದ್ದರು.
ಸಿಬಿಐ ಅಧಿಕಾರಿಗಳು ಪಿಸಿ ಕಾಯ್ದೆ 1988ರ ಅಡಿ 13(2), 13(1)(ಇ) ಸೆಕ್ಷನ್ನಡಿ ಡಿ.ಕೆ.ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 13(2) ಪ್ರಕಾರ 1 ವರ್ಷಕ್ಕೆ ಕಡಿಮೆ ಇಲ್ಲದಂತೆ ಗರಿಷ್ಠ 7 ವರ್ಷ ಶಿಕ್ಷೆ ಹಾಗೂ ದಂಡ, ಸೆಕ್ಷನ್ 13(1)(ಇ) ಪ್ರಕಾರ ಆದಾಯದ ಮೂಲ ದಾಖಲೆಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಇದಕ್ಕೆ ಸೂಕ್ತ ಶಿಕ್ಷೆ ವಿಧಿಸಲಾಗುತ್ತದೆ.
ಡಿಕೆಶಿ ಸಚಿವರಾಗಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ಎಸಗಿ ಅಕ್ರಮವಾಗಿ ಸಂಪಾದಿಸಲು ಇವರಿಗೆ ಸಹಕರಿಸಿದ ಸರ್ಕಾರಿ ಅಧಿಕಾರಿಗಳಿಗೂ ಕಂಟಕ ಎದುರಾಗಿದೆ. ಆದಾಯ ಹೆಚ್ಚಿಸಿಕೊಳ್ಳಲು ಕೆಲ ಸರ್ಕಾರಿ ಅಧಿಕಾರಿಗಳು ಡಿಕೆಶಿ ಸಹಕರಿಸಿರುವುದು ಸಿಬಿಐ ತನಿಖೆಯಲ್ಲಿ ಗೊತ್ತಾಗಿದೆ.
ಡಿ.ಕೆ.ಶಿವಕುಮಾರ್ ಮನೆಯಲ್ಲಿ ನಡೆದ ದಾಳಿ ವೇಳೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದ್ದು, ಮಗಳು ಐಶ್ವರ್ಯಾ ವಿವಾಹಕ್ಕೆಂದು ಡಿಕೆಶಿ ಮಾಡಿಸಿಟ್ಟ ಚಿನ್ನಾಭರಣ ಎಂದು ತಿಳಿದು ಬಂದಿದೆ. ಇದೀಗ ಈ ಎಲ್ಲ ಚಿನ್ನಾಭರವಣನ್ನೂ ಸಿಬಿಐ ಜಪ್ತಿ ಮಾಡಿದ್ದು, ಇದಕ್ಕೆ ಸಂಬಂಧಿಸಿದ ಬಿಲ್ಗಳನ್ನು ನೀಡುವಂತೆ ಸೂಚಿಸಿದೆ. ದಾಖಲೆ ನೀಡಿದರೆ ಚಿನ್ನ ವಾಪಸ್ ಕೊಡಲಿದ್ದಾರೆ.
ಸಿಬಿಐ ತನಿಖೆಗೆ ಅನುಮತಿ ನೀಡಿ ಸರ್ಕಾರ ಹೊರಡಿಸಿರುವ ಆದೇಶ ರದ್ದುಕೋರಿ ಈಗಾಗಲೆ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿರುವ ಡಿಕೆಶಿ, ಅರ್ಜಿಯ ತುರ್ತು ವಿಚಾರಣೆಗೆ ಮನವಿ ಸಲ್ಲಿಸಬಹುದು. ಅರ್ಜಿ ವಿಚಾರಣೆಗೆ ಹೈಕೋರ್ಟ್ ಒಪ್ಪಿದರೆ, ಸರ್ಕಾರದ ಆದೇಶದ ಮುಂದಿನ ಎಲ್ಲ ಪ್ರಕ್ರಿಯೆಗೆ ತಡೆ ನೀಡುವಂತೆ ಮಧ್ಯಂತರ ಮನವಿ ಮಾಡುವ ಸಾಧ್ಯತೆಯೂ ಇದೆ.