

ನವದೆಹಲಿ: ಟಾಟಾ ಸನ್ಸ್ ಸಮೂಹದ ಕಾರ್ಯ ನಿರ್ವಾಹಕ ಅಧ್ಯಕ್ಷ ಸ್ಥಾನವನ್ನು ಬಯಸುವುದಿಲ್ಲ ಎಂದು ಅಧ್ಯಕ್ಷ ಹುದ್ದೆಯಿಂದ ಪದಚ್ಯುತರಾಗಿದ್ದ ಸೈರಸ್ ಮಿಸ್ತ್ರಿ ಭಾನುವಾರ ಹೇಳಿದ್ದಾರೆ.
ಮಿಸ್ತ್ರಿ ವಜಾ ಮಾಡಿದ್ದನ್ನು ರದ್ದುಪಡಿಸಿ ಅವರನ್ನು ಮರುನೇಮಕ ಮಾಡುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣ (ಎನ್ಸಿಎಲ್ಎಟಿ) ಡಿಸೆಂಬರ್ನಲ್ಲಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಟಾಟಾ ಸನ್ಸ್ ಮತ್ತು ಅದರ ಮುಖ್ಯಸ್ಥ ರತನ್ ಟಾಟಾ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸೋಮವಾರ ಅದರ ವಿಚಾರಣೆ ನಡೆಯಲಿದ್ದು ಮಿಸ್ತ್ರಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ‘ಎನ್ಸಿಎಲ್ಎಟಿ ಆದೇಶದಿಂದ ನಾನು ವಿನೀತನಾಗಿದ್ದೇನೆ. ಆದರೆ ನಾನು ಟಾಟಾ ಸನ್ಸ್ನ ಕಾರ್ಯನಿರ್ವಾಹಕ ಹುದ್ದೆಯ ಹಿಂದೆ ಬಿದ್ದಿಲ್ಲ. ಟಿಸಿಎಸ್, ಟಾಟಾ ಟೆಲಿಸರ್ವಿಸಸ್ ಅಥವಾ ಟಾಟಾ ಇಂಡಸ್ಟ್ರೀಸ್ನ ನಿರ್ದೇಶಕತ್ವವೂ ನನಗೆ ಬೆಕಿಲ್ಲ’ ಎಂದು ಮಿಸ್ತ್ರಿ ತಿಳಿಸಿದ್ದಾರೆ. ಟಾಟಾ ಸಮೂಹದ ಒಟ್ಟಾರೆ ಹಿತದೃಷ್ಟಿಯಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಯಾವುದೇ ಒಬ್ಬ ವ್ಯಕ್ತಿಗಿಂತ ಸಮೂಹದ ಹಿತವೇ ಮುಖ್ಯವಾದದ್ದು ಎಂದು ಅವರು ಹೇಳಿದ್ದಾರೆ.