

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ದಂಪತಿ ಸೇರಿ ನಾಲ್ವರು ಗಾಯಗೊಂಡಿರುವ ಪ್ರಕರಣ ಮಾರತ್‌ಹಳ್ಳಿಯಲ್ಲಿ ಭಾನುವಾರ ನಡೆದಿದೆ. ಮುನೆಕೊಳಲು ವಸಂತ ಲೇಔಟ್‌ನಲ್ಲಿ ಬೆಳಗ್ಗೆ ೬.೪೫ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಸೆಲ್ವ ನಾಯಕ್(೫೪), ಪತ್ನಿ ಸುಧಾ ಬಾಯಿ(೩೨), ಮಕ್ಕಳಾದ ನಂದಿತಾ(೧೫), ಮನೋಜ್(೧೨) ಗಾಯಗೊಂಡಿದ್ದಾರೆ. ಈ ಪೈಕಿ ಸುಧಾ ಬಾಯಿಗೆ ತೀವ್ರ ಸುಟ್ಟ ಗಾಯಗಳಾಗಿ ಅವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಉಳಿದ ಮೂವರೂ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಡುಗೆ ಮನೆ ಲೈಟ್ ಹಾಕಿದ ತಕ್ಷಣ ಸ್ಫೋಟ:
ಚಾಮರಾಜನಗರ ಮೂಲದ ಸೆಲ್ವ ನಾಯಕ್ ಕುಟುಂಬ ಕಳೆದ ೧೫ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಮುನೆಕೊಳಲಿನ ವಸಂತ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸೆಲ್ವ ನಾಯಕ್ ಆಟೋದಲ್ಲಿ ಪಾದರಕ್ಷೆ ತುಂಬಿಕೊಂಡು ನಗರದ ವಿವಿಧೆಡೆ ಮಾರಾಟ ಮಾಡುವ ಕೆಲಸ ಮಾಡುತ್ತಾರೆ. ಶನಿವಾರ ರಾತ್ರಿ ಊಟ ಮುಗಿಸಿ ಸೆಲ್ವ ನಾಯಕ್ ದಂಪತಿ ಹಾಗೂ ಇಬ್ಬರು ಮಕ್ಕಳು ಮಲಗಿದ್ದರು. ಈ ವೇಳೆ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್‌ನ ರೆಗ್ಯೂಲೇಟರ್ ಆಫ್ ಮಾಡುವುದನ್ನು ಸುಧಾ ಬಾಯಿ ಮರೆತಿದ್ದರಿಂದ ಅನಿಲ ಸೋರಿಕೆಯಾಗಿದೆ. ಭಾನುವಾರ ಬೆಳಗ್ಗೆ ೬.೪೫ಕ್ಕೆ ಎದ್ದ ಸುಧಾ ಬಾಯಿ, ಅಡುಗೆ ಮನೆ ಲೈಟ್ ಹಾಕಿದ ತಕ್ಷಣ ಸಿಲಿಂಡರ್ ಸ್ಫೋಟಗೊಂಡಿದೆ.
ನೆರವಿಗೆ ಧಾವಿಸಿದ ಸ್ಥಳೀಯರು
ಬೆಂಕಿ ಹೊತ್ತಿಕೊಂಡು ಸುಧಾ ಬಾಯಿ ಚೀರಾಡಿದಾಗ ಸೆಲ್ವ ನಾಯಕ್ ಪತ್ನಿಯ ರಕ್ಷಣೆಗೆ ಮುಂದಾದಾಗ ಅವರೂ ಗಾಯಗೊಂಡಿದ್ದಾರೆ. ಇನ್ನು ರೂಮ್‌ನಲ್ಲಿದ್ದ ಮಕ್ಕಳು ಎದ್ದು ಓಡಿ ಬಂದಿದ್ದಾರೆ. ಈ ವೇಳೆ ಅವರಿಗೂ ಗಾಯಗಳಾಗಿವೆ. ಅಷ್ಟರಲ್ಲಿ ಮನೋಜ್ ಮನೆಯ ಬಾಗಿಲು ತೆರೆದು ಸಹಾಯಕ್ಕೆ ಕೂಗಿ ಕೊಂಡಿದ್ದಾನೆ. ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಿಲಿಂಡರ್ ಸ್ಫೋಟದ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಮಾರತ್‌ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಸಿಲಿಂಡರ್ ಸ್ಫೋಟದಿಂದ ಮನೆಯ ವಸ್ತುಗಳು, ಪಿಠೋಪಕರಣಗಳು, ಗೋಡೆಗಳಿಗೆ ಹಾನಿಯಾಗಿದೆ. ಈ ಸಂಬಂಧ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.