

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬ ಐವರು ಗಾಯಗೊಂಡಿದ್ದಾರೆ. ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ.
ಸಂಪಿಗೆಹಳ್ಳಿಯ ಎಂ.ಎಸ್.ನಗರದ ನಿವಾಸಿ ಮದನ್ ಬಹೋರಾ(೩೨), ಆತನ ಪತ್ನಿ ಪ್ರೇಮಾಜಾಲಾ( ೨೮), ಪುತ್ರಿಯರಾದ ಮೀರಾದಾ(೧೨), ಒಹೋರಾ(೧೦) ಮತ್ತು ಪುತ್ರ ಪ್ರಶಾಂತ್(೬) ಗಾಯಗೊಂಡವರು. ಐವರ ಪೈಕಿ ಮದನ್‌ಗೆ ಶೇ.೯೦ರಷ್ಟು ಗಾಯಗಳಾಗಿದ್ದು, ಇತರರಿಗೂ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಐವರು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟುಗಾಯ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೇಪಾಳ ಮೂಲದ ಮದನ್, ನಗರದಲ್ಲಿ ರೆಮ್ಯಾಟೋದಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ಮನೆಯಲ್ಲೇ ಇರುತ್ತಿದ್ದರು. ಮಕ್ಕಳು ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬುಧವಾರ ರಾತ್ರಿ ೧೧ ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಅಷ್ಟರಲ್ಲಿ ಮಕ್ಕಳು ಊಟ ಮುಗಿಸಿ ಮಲಗಿದ್ದರು. ಪತ್ನಿ ಪ್ರೇಮಾಜಾಲ,ಅಡುಗೆ ಅನಿಲ ಸೋರಿಕೆಯಾಗಿದೆ, ಒಮ್ಮೆ ಪರಿಶೀಲಿಸುವಂತೆ ಮದನ್‌ಗೆ ಹೇಳಿದ್ದಾರೆ. ಆದರೆ, ಮದನ್, ಅಡುಗೆ ಮನೆಗೆ ಹೋಗಿ ಕಿಟಕಿ ತೆರೆಯದೆ ಏಕಾಏಕಿ ಬೆಂಕಿ ಕಟ್ಟಿ ಹಚ್ಚಿದ್ದಾರೆ. ಅದರಿಂದ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.