ಸದೃಢ ದೇಹಕ್ಕಾಗಿ ಸೈಕ್ಲಿಂಗ್ ಸೂಕ್ತ

scout
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಮಕ್ಕಳಿಗೆ ಏರ್ಪಡಿಸಿದ್ದ ಪರಿಸರ ಜಾಗೃತಿ ಮತ್ತು ಸೈಕ್ಲಿಂಗ್ ಜಾಗೃತಿ ಜಾಥಾಕ್ಕೆ ಕೆ.ರವಿ ಚಾಲನೆ ನೀಡಿದರು. ಜಿ.ವಿಜಯಕುಮಾರ್, ಸೋಮಲಿಂಗಯ್ಯ, ರಾಜೇಶ್ ಅವಲಕ್ಕಿ, ಸಂತೋಷ್ ಬಿದರಗಡ್ಡೆ ಇತರರಿದ್ದರು.
Published on

ಶಿವಮೊಗ್ಗ: ಮಕ್ಕಳಿಗೆ ಪರಿಸರ ಜ್ಞಾನದ ಜತೆಗೆ ಹೊರಾಂಗಣ ಚಟುವಟಿಕೆಗಳು ಸಹ ಮುಖ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರೋವರ್ ವಿಭಾಗದ ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ಕೆ.ರವಿ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಮಕ್ಕಳಿಗೆ ಏರ್ಪಡಿಸಿದ್ದ ಪರಿಸರ ಜಾಗೃತಿ ಮತ್ತು ಸೈಕ್ಲಿಂಗ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಮಕ್ಕಳ ವಿದ್ಯಾಭ್ಯಾಸದ ಜತೆಗೆ ಕ್ರೀಡೆ, ಸೈಕ್ಲಿಂಗ್, ವ್ಯಾಯಾಮ ಹಾಗೂ ಯೋಗಾಸನದ ಕಡೆಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಸೈಕಲ್ ತುಳಿಯುವುದರಿಂದ ದೇಹ, ಮನಸ್ಸು ಸದೃಢವಾಗುವ ಜತೆಗೆ ದೇಹದ ಅಂಗಾಂಗಗಳಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಆರೋಗ್ಯ ಪಡೆಯಬಹುದು. ಬಾಲ್ಯದಿಂದಲೇ ಸೈಕಲ್ ಹೊಡೆಯಬೇಕು. ಮುಂದೆ ಎಲ್ಲ ವಾಹನಗಳನ್ನು ಓಡಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಸೈಕಲ್ ಜಾಗೃತಿ ಜಾಥಾ ನೇತೃತ್ವ ವಹಿಸಿ ಮಾತನಾಡಿದ ಮಲ್ನಾಡ್ ಓಪನ್ ಗ್ರೂಪ್ ಸ್ಥಳೀಯ ಕಾರ್ಯದರ್ಶಿ ರಾಜೇಶ್, ಮಕ್ಕಳಲ್ಲಿ ಲವಲವಿಕೆ ಹಾಗೂ ಬುದ್ಧಿಶಕ್ತಿ ಚುರುಕುಗೊಳಿಸಲು ಸೈಕ್ಲಿಂಗ್ ತುಂಬ ಪರಿಣಾಮಕಾರಿ. ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತೊಡಗುವುದರಿಂದ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಪರಿಸರ ಜಾಗೃತಿ ಮೂಡಿಸಿ ಪುರದಾಳ್‌ವರೆಗೆ ಸೈಕಲ್ ಜಾಥಾ ನಡೆಸಲಾಯಿತು. ನ್ಯಾಷನಲ್ ಪಬ್ಲಿಕ್ ಶಾಲೆಯ ಸ್ಕೌಟ್ಸ್ ಮಾಸ್ಟರ್ ಸೋಮಲಿಂಗಯ್ಯ, ಶಿಕ್ಷಕ ಸಂತೋಷ್ ಬಿದರಗಡ್ಡೆ, ರೋವರ್ ವಿಭಾಗದ ಚೇತನ್, ರೇಂಜರ್ ವಿಭಾಗದ ಶ್ರೇಯಾ, ವರುಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net