

ಬೆಂಗಳೂರು: ಸೈಬರ್ ವಂಚಕರು ದಿನಕ್ಕೊಂದು ರೀತಿ ಜನರನ್ನು ವಂಚಿಸುತ್ತಿದ್ದು, ಇದೀಗ ನಗರ ಸಂಚಾರ ಪೊಲೀಸರ ಹೆಸರಿನಲ್ಲಿ ವಂಚಿಸಲು ಮುಂದಾಗಿದ್ದಾರೆ.
ನಾವು ಕಳುಹಿಸಿದ ಕ್ಯೂಆರ್ ಕೋಡ್ ಮೂಲಕ ದಂಡವನ್ನು ಪಾವತಿಸಿ ಎಂದು ವಾಹನ ಮಾಲೀಕರಿ, ಸಂಚಾರ ಪೊಲೀಸ್ ಇಲಾಖೆ ಹೆಸರಿನಲ್ಲಿ ಸಂದೇಶ ಕಳುಹಿಸುತ್ತಿದ್ದಾರೆ.
ನೀವು ಸಂಚಾರ ನಿಯಮವನ್ನು ಉಲ್ಲಂಘಿಸಿದ್ದೀರಿ ದಂಡ ಪಾವತಿಸಿ ಎಂದು ನಿಮ್ಮ ವಾಟ್ಸ್‌ಆ್ಯಪ್ ನಂಬರ್‌ಗೆ ಸಂದೇಶ ಬಂದರೇ, ಹಣ ಪಾವತಿಸುವುಕ್ಕಿಂತ ಮುಂಚೆ ಒಂದು ಬಾರಿ ಮರು ಪರಿಶೀಲಿಸಿಕೊಳ್ಳಿ. ಏಕೆಂದರೆ ಅದು ಸೈಬರ್ ವಂಚಕರ ಸಂದೇಶವೂ ಆಗಿರಬಹುದು.
ಕ್ಯೂಆರ್ ಕೋಡ್ ಕಳುಹಿಸುವ ವಂಚಕರು:
ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಹೆಸರಿನಲ್ಲಿ ವಾಹನ ಮಾಲೀಕರನ್ನು ಸೈಬರ್ ವಂಚಕರು ವಂಚಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ದಂಡ ಪಾವತಿಸಿದ ನಂತರವೂ ಮತ್ತೆ ದಂಡ ಪಾವತಿಸುವಂತೆ ವಾಹನ ಮಾಲೀಕರಿಗೆ ಬೆಂಗಳೂರು ಸಂಚಾರ ಪೊಲೀಸರ ಹೆಸರಿನಲ್ಲಿ ಸೈಬರ್ ವಂಚಕರು ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸುತ್ತಿದ್ದಾರೆ. ಈ ಮೂಲಕ ಸೈಬರ್ ವಂಚಕರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಈ ರೀತಿ ಹೆಚ್ಚಿನ ಪ್ರಕರಣಗಳು ನಗರದಲ್ಲಿ ನಡೆದಿವೆ. ಸೈಬರ್ ವಂಚಕರು ವಾಹನ ಮಾಲೀಕರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ದಂಡ ಬಾಕಿ ಇದೆ. ನಾವು ಕಳುಹಿಸಿದ ಕ್ಯೂಆರ್ ಕೋಡ್ ಮೂಲಕ ದಂಡವನ್ನು ಪಾವತಿಸಿ ಸಂಚಾರ ಪೊಲೀಸ್ ಇಲಾಖೆ ಹೆಸರಿನಲ್ಲಿ ಸಂದೇಶ ಕಳುಹಿಸುತ್ತಿದ್ದಾರೆ.
ಇಂತಹ ವಂಚನೆ ಜಾಲಗಳಲ್ಲಿ ಸಿಲುಕಬೇಡಿ:
ಈ ಬಗ್ಗೆ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಅವರು ಮಾತನಾಡಿ, ವಾಹನ ಮಾಲೀಕರು ಇಂತಹ ವಂಚನೆ ಜಾಲಗಳಲ್ಲಿ ಸಿಲುಕಬೇಡಿ. ಬೆಂಗಳೂರು ಸಂಚಾರ ಪೊಲೀಸರು ನೋಟೀಸ್ ಅನ್ನು ಪೋಸ್ಟ್ ಮೂಲಕ ಮಾತ್ರ ಕಳುಹಿಸುತ್ತಾರೆ. ನಾವು ವಾಟ್ಸ್‌ಆ್ಯಪ್ ಸಂದೇಶಗಳನ್ನು ಕಳುಹಿಸುವುದಿಲ್ಲ ಮತ್ತು ಕ್ಯೂಆರ್ ಕೋಡ್ ಮೂಲಕ ದಂಡವನ್ನು ಪಾವತಿಸಲು ಯಾವುದೇ ಆಯ್ಕೆಗಳಿಲ್ಲ. ಹೀಗಾಗಿ ವಂಚಕರ ಬಗ್ಗೆ ಎಚ್ಚರದಿಂದಿರಿ ಎಂದು ಹೇಳಿದ್ದಾರೆ.