ಯುವತಿಗೆ ೨.೪೯ ಲಕ್ಷ ರೂ. ವಂಚಿಸಿದ ಸೈಬರ್ ವಂಚಕರು

Cybercriminal
Published on

ಬೆಂಗಳೂರು: ಯು.ಎಸ್ ಡಾಲರ್ ಅನ್ನು ಇಂಡಿಯಾ ರೂಪಾಯಿಗೆ ಬದಲಾಯಿಸುವ ಕೆಲಸವನ್ನು ತಾನು ಮಾಡಿಕೊಂಡಿದ್ದು, ಅದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಯುವತಿಗೆ ಸೈಬರ್ ವಂಚಕರು ೨.೪೯ ಲಕ್ಷ ರೂ. ವಂಚಿಸಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

ಮೈಲಸಂದ್ರದ ಜಾನವೀ (೨೫) ವಂಚನೆಗೊಳಗಾದ ಯುವತಿ.

ಆ.೮ರಂದು ಅಪರಿಚಿತನ ನಂಬರ್‌ನಿಂದ ಜಾನವಿ ಅವರ ವಾಟ್ಸ್‌ಆ್ಯಪ್ ನಂಬರ್‌ಗೆ ಸಂದೇಶವೊಂದು ಬಂದಿತ್ತು. ಆ ವ್ಯಕ್ತಿಯು ಕಾಲೇಜಿನ ಸಿನಿಯರ್ ಎಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದ. ಯಾವುದಾದರೂ ಪಾರ್ಟ್ ಟೈಮ್ ಜಾಬ್ ಅನ್ನು ಹುಡುಕುತ್ತಿದ್ದೀರಾ ಎಂದು ಕೇಳಿ ಜಾನವಿ ಜತೆಗೆ ಸ್ನೇಹವನ್ನು ಸಂಪಾದಿಸಿದ್ದ. ಮತ್ತೊಂದು ಮೊಬೈಲ್ ನಂಬರ್‌ನಿಂದ ವಾಟ್ಸಪ್ ಮೂಲಕ ಮೇಸೆಜ್ ಮಾಡಿದ ಅಪರಿಚಿತ ಯು.ಎಸ್ ಡಾಲರ್ ಅನ್ನು ಇಂಡಿಯಾ ರೂಪಾಯಿಗೆ ಬದಲಾಯಿಸುವ ಕೆಲಸವನ್ನು ಮಾಡುತ್ತಿದ್ದು, ನೀವು ಸಹ ಅದರಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅದರಲ್ಲಿ ಬರುವ ಲಾಭವನ್ನು ನಿಮಗೆ ನೀಡುತ್ತೇನೆಂದು ನಂಬಿಸಿದ್ದ. ದೂರುದಾರರಿಂದ ಮೊದಲು ೬ ಸಾವಿರ ರೂ. ಪೋನ್ ಪೇ ಮೂಲಕ ಪಡೆದುಕೊಂಡಿದ್ದ.

ಹೀಗೆ ಇನ್ನೂ ಹೆಚ್ಚಿನ ಹಣವನ್ನು ನನಗೆ ಕಳುಹಿಸಿದರೆ ಹೆಚ್ಚಿನ ಹಣವನ್ನು ಲಾಭವಾಗಿ ಒಟ್ಟಿಗೆ ಮರುಪಾವತಿಸುತ್ತೇನೆಂದು ಹೇಳಿದ್ದ. ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿದ ಜಾನವಿ, ಆತ ನೀಡಿದ ವಿವಿಧ ರೀತಿಯ ಯು.ಪಿ.ಐ ಐಡಿಗಳಿಗೆ ಹಂತ-ಹಂತವಾಗಿ ಒಟ್ಟು ೨,೪೯,೨೯೯ ರೂ.ಗಳನ್ನು ಪೋನ್ ಪೇ ಮೂಲಕ ವರ್ಗಾವಣೆ ಮಾಡಿದ್ದರು. ಇದಾದ ಬಳಿಕ ಮತ್ತೆೆ ಹಣ ಹೂಡಿಕೆ ಮಾಡುವಂತೆ ಅಪರಿಚಿತ ವ್ಯಕ್ತಿ ಹೇಳಿದಾಗ ಅನುಮಾನಗೊಂಡ ಜಾನವಿ, ಈ ಬಗ್ಗೆೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ. ಯುವತಿ ಕೆಂಗೇರಿ ಪೊಲೀಸ್ ಠಾಣೆಗೆ ಈ ಬಗ್ಗೆೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net