ಮಕ್ಕಳಿಗೆ ಡ್ರಗ್ಸ್ ನಂಟಿನ ಕಥೆ ಕಟ್ಟಿ ಸೈಬರ್ ಧೋಖಾ

Cyber ​​crime is increasing in Kodagu
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಅಮಾಯಕ ಜನರಿಗೆ ಕರೆ ಮಾಡಿ, ‘ನಿಮ್ಮ ಮಗಳನ್ನು ಮಾದಕ ದ್ರವ್ಯ ಕೇಸ್‌ನಲ್ಲಿ ಬಂಧಿಸಿದ್ದೇವೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿ ಸುಲಿಗೆ ಮಾಡುತ್ತಿರುವ ಸೈಬರ್ ಕಳ್ಳರ ವಿರುದ್ಧ ರಾಜ್ಯದಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸ್‌ಗಳು ದಾಖಲಾಗಿವೆ.

ನಾಗರಬಾವಿ 2ನೇ ಹಂತ ಎಂಪಿಎಂ ಲೇಔಟ್‌ನಲ್ಲಿ ನೆಲೆಸಿರುವ ಉದ್ಯಮಿಯೊಬ್ಬರಿಗೆ ಬೆಳಗ್ಗೆಯೇ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಮುಂಬೈ ಪೊಲೀಸ್ ಎಂದು ಪರಿಚಯ ಮಾಡಿಕೊಂಡು, ‘ನಿಮ್ಮ ಮಗಳ ಬ್ಯಾಗ್ ಮತ್ತು ದ್ವಿಚಕ್ರ ವಾಹನದಲ್ಲಿ ಗಾಂಜಾ, ಕೊಕೇನ್ ಹಾಗೂ ನಕಲಿ ಪಾಸ್‌ಪೋರ್ಟ್, ಸಿಮ್ ಕಾರ್ಡ್ ಪತ್ತೆಯಾಗಿವೆ. ಆದರಿಂದ ಈ ಕೂಡಲೇ ಬಂಧಿಸಿದ್ದೇವೆ. ಚಿಕ್ಕ ವಯಸ್ಸಿನಲ್ಲೇ ಕೋರ್ಟ್, ಕಚೇರಿ ಮತ್ತು ಜೈಲು ಎಂದರೆ ಭವಿಷ್ಯಕ್ಕೆ ಧಕ್ಕೆ ಆಗಲಿದೆ. ನಮ್ಮ ಜೀಪ್ ಹಿಂದೆಯೇ ಸುದ್ದಿವಾಹಿನಿ ಪ್ರತಿನಿಧಿಗಳು ಾಲೋ ಮಾಡುತ್ತಿದ್ದಾರೆ’ ಎಂದು ಹೇಳಿ ಶಾಕ್ ನೀಡಿದ್ದ. ‘ಕೂಡಲೇ ಹಣ ವರ್ಗಾಯಿಸಿದರೆ ನಿಮ್ಮ ಮಗಳನ್ನು ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಮಾಡಿ, ಬಿಡುಗಡೆ ಮಾಡುತ್ತೇವೆ’ ಎಂದಿದ್ದರು. ಉದ್ಯಮಿ ದಂಪತಿ ಹೆದರಿಕೊಂಡು ಮಗಳ ಭವಿಷ್ಯ ಮತ್ತು ಮರ್ಯಾದೆಗೆ ಅಂಜಿ ಹಣ ಕೊಡಲು ಒಪ್ಪಿಕೊಂಡಿದ್ದರು.

ಅಪರಿಚಿತ ವ್ಯಕ್ತಿ, ಮೊದಲಿಗೆ 22 ಸಾವಿರ ರೂ. ಕೇಳಿದಾಗ ಉದ್ಯಮಿ ತನ್ನ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದ್ದರು. ಇದಾದ ಮೇಲೆ ಮತ್ತೆ 88 ಸಾವಿರ ರೂ.ಗೆ ಬೇಡಿಕೆ ಒಡ್ಡಿದಾಗ ಅದನ್ನು ತಮ್ಮ ಅಳಿಯನ ಕಡೆಯಿಂದ ವರ್ಗಾವಣೆ ಮಾಡಿಸಿದ್ದರು. ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿದಾಗ ಒಟ್ಟಾರೆ 2 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ತನ್ನ ಬಳಿಯಿದ್ದ ಹಣವೆಲ್ಲ ಖಾಲಿಯಾದ ಬಳಿಕ ಆಪ್ತ ಸ್ನೇಹಿತರಿಗೆ ಹಣಕ್ಕಾಗಿ ಉದ್ಯಮಿ ಕರೆ ಮಾಡಿದಾಗ, ‘ಇದೊಂದು ಸೈಬರ್ ಕಳ್ಳರ ಟ್ರ್ಯಾಪ್ ಆಗಿರಬಹುದು... ಹೆದರಬೇಡಿ’ ಎಂದು ಧೈರ್ಯ ತುಂಬಿದ್ದರು. ಅಲ್ಲಿಯವರೆಗೂ ಮಗಳಿಗೆ ಕರೆಯೇ ಮಾಡದ ಉದ್ಯಮಿ, ಆಗ ಮಗಳಿಗೆ ವಿಡಿಯೋ ಕರೆ ಮಾಡಿ ವಿಚಾರಿಸಿದಾಗ ಕಾಲೇಜಿನಲ್ಲಿ ಇರುವುದು ತಿಳಿದುಬಂದಿತ್ತು. ನಂತರ ಅನ್ನಪೂರ್ಣೇಶ್ವರಿನಗರ ಠಾಣೆಗೆ ಉದ್ಯಮಿ ದೂರು ಸಲ್ಲಿಸಿದ್ದಾರೆ.

ಡಿಪಿಗೆ ಪೊಲೀಸ್ ಪೋಟೋ

ಮುಂಬೈ ಪೊಲೀಸರ ಸೋಗಿನಲ್ಲಿ ವಾಟ್ಸ್‌ಆ್ಯಪ್ ಕರೆ ಮಾಡುವ ಸೈಬರ್ ಕಳ್ಳರು, ವಾಟ್ಸ್‌ಆ್ಯಪ್ ಡಿ.ಪಿ.ಗೆ ಐಪಿಎಸ್ ಅಧಿಕಾರಿ ಪೋಟೋವನ್ನು ಹಾಕಿಕೊಂಡು ದಾರಿ ತಪ್ಪಿಸುತ್ತಿದ್ದಾರೆ. ಡಿ.ಪಿ. ನೋಡಿದಾಗ ಜನರು ಅಸಲಿ ಪೊಲೀಸ್ ಎಂದು ನಂಬಿ ಹೆದರುತ್ತಿದ್ದಾರೆ. ಅಲ್ಲದೆ, ಯಾರಿಗೂ ಕರೆ ಮಾಡದಂತೆ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಯಾರಿಗಾದರೂ ಕರೆ ಮಾಡಿದರೆ ಬಂಧಿಸಿ ಮೀಡಿಯಾಗೆ ಹೇಳಿ ಟಿ.ವಿ.ಯಲ್ಲಿ ಬರುವಂತೆ ಮಾಡುತ್ತೇವೆ. ನಿಮ್ಮ ಮಗಳು ನಮ್ಮ ಬಳಿಯೇ ಇದ್ದಾಳೆ. ತಕ್ಷಣ ಹಣ ವರ್ಗಾವಣೆ ಮಾಡಿದರೆ ನಿಮ್ಮ ಮಗಳು ಸ್ೇ ಆಗಿ ಮನೆಗೆ ಬರುತ್ತಾಳೆ ಎಂದು ಕರೆ ಸ್ಥಗಿತ ಮಾಡದೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ.

ಸೈರನ್ ಸೌಂಡ್, ಬ್ಯಾಗ್‌ನಲ್ಲಿ ಗಾಂಜಾ

ವಾಟ್ಸ್‌ಆ್ಯಪ್ ಕರೆ ಸಂಭಾಷಣೆಯಲ್ಲಿ ಇದ್ದಾಗ ಹಿಂದೆ ಪೊಲೀಸ್ ಜೀಪ್ ಸೈರನ್ ಸೌಂಡ್ ಕೇಳಿಸುತ್ತದೆ. ವಾಕಿಟಾಕಿಯಲ್ಲಿ ಪೊಲೀಸರು ಸಂಭಾಷಣೆ ನಡೆಯುತ್ತದೆ. ಪಾಲಕರ ಬಳಿಯೇ ಮಗಳ ಹೆಸರು, ವಿಳಾಸ ಕೇಳಿಕೊಂಡು ಆ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ವರದಿ ಒಪ್ಪಿಸಿದಂತೆ ನಾಟಕ ಮಾಡಿ ಭಯ ಬೀಳಿಸುತ್ತಾರೆ. ಅಲ್ಲದೆ, ವಿಡಿಯೋ ಕಾಲ್ ಮಾಡಿ ಬ್ಯಾಗ್‌ನಲ್ಲಿ ಡ್ರಗ್ಸ್ ಪತ್ತೆ ಆಗಿದ್ದು, ಆರೆಸ್ಟ್ ಮಾಡಿರುವುದಾಗಿ ಬೇರೊಂದು ವಿಡಿಯೋ ತುಣುಕು ತೋರಿಸಿ ಹೆದರಿಸುತ್ತಾರೆ.

ಡ್ರಗ್ಸ್ ಕೇಸಿನಲ್ಲಿ ಮಗಳನ್ನು ಬಂಧಿಸಿರುವುದಾಗಿ ಬೆದರಿಸಿದರು. ಪುತ್ರಿಗೂ ಕಾಲ್ ಮಾಡಲು ಬಿಡದೆ ಒಂದೂವರೆ ತಾಸಿನಲ್ಲಿ 2 ಲಕ್ಷ ರೂ. ಸುಲಿಗೆ ಮಾಡಿದರು. ಮರ್ಯಾದೆಗೆ ಹೆದರಿ ವರ್ಗಾವಣೆ ಮಾಡಿದೆ. ಒಮ್ಮೆ ಪುತ್ರಿಗೆ ಕರೆ ಮಾಡಿದ್ದರೆ ನಿಜಾಂಶ ತಿಳಿಯುತ್ತಿತ್ತು.

ಉದ್ಯಮಿ, ವಂಚನೆಗೆ ಒಳಗಾದವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net