

ಕೊಚ್ಚಿ: ದೇಶದ ಗಮನಸೆಳೆದ ಚಿನ್ನ ಕಳ್ಳಸಾಗಣೆ ಕೇಸ್ಗೆ ಸಂಬಂಧಿಸಿ ಅಮಾನತುಗೊಂಡ ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಅವರನ್ನು ಔಪಚಾರಿಕವಾಗಿ ಬಂಧಿಸಿದ್ದಾಗಿ ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಈಗಾಗಲೇ ಜೈಲಿನಲ್ಲಿದ್ದ ಎಂ.ಶಿವಶಂಕರ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಅಲ್ಲೇ ಬಂಧಿಸಿರುವ ದಾಖಲೆಯೊಂದಿಗೆ ಅವರ ಹೇಳಿಕೆಗಳನ್ನು ದಾಖಲಿಸಿದರು.
ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಶಂಕರ್ ಅವರನ್ನು ಬಂಧಿಸಿದ್ದು, ವಿಚಾರಣೆ ಪ್ರಗತಿಯಲ್ಲಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಬಂಧನದ ದಾಖಲೆಗಳೊಂದಿಗೆ ಕೋರ್ಟ್ನಲ್ಲಿ ಅವರನ್ನು ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಕೇಳಿಕೊಳ್ಳಲಿದ್ದಾರೆ. ಪಿಎಂಎಲ್ಎ ಕೇಸ್ಗಳಿಗೆ ಸಂಬಂಧಪಟ್ಟು ಬಂಧನ ದಾಖಲಿಸಿಕೊಳ್ಳುವುದಕ್ಕೆ ವಿಶೇಷ ಕೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಗೆ ನಿನ್ನೆ ಅನುಮತಿ ನೀಡಿತ್ತು.
ಚಿನ್ನ ಕಳ್ಳಸಾಗಣೆ ಕೇಸ್ಗೆ ಸಂಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ಇದುವರೆಗೆ 15 ಆರೋಪಿಗಳನ್ನು ಬಂಧಿಸಿದೆ. ಇವರ ಪೈಕಿ ಸ್ವಪ್ನಾ ಸುರೇಶ್, ಸರಿತಾ ಪಿಎಸ್, ಸಂದೀಪ್ ನಾಯರ್ ಪ್ರಮುಖರು. (ಏಜೆನ್ಸೀಸ್)